ಕಾರವಾರ:ಭಾರಿ ಮಳೆಯಿಂದ ಸಂಗಮನಾಲಾದ ಮೂಲಕ ಸಮುದ್ರ ಸೇರುವ ಮಳೆ ನೀರು ಗೋಕರ್ಣದ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದ ಸೋಮಸೂತ್ರದಿಂದ ಗರ್ಭಗುಡಿಗೆ ನುಗ್ಗಿ ಮಹಾಪೂಜೆಗೆ ತೊಡಕು ಉಂಟಾದ ಘಟನೆ ಶುಕ್ರವಾರ ನಡೆದಿದೆ.
ಮಹಾಬಲೇಶ್ವರ ದೇವಾಲಯದ ತೀರ್ಥ ಸೋಮಸೂತ್ರದ ಮೂಲಕ ಸ್ಮಶಾನಕಾಳಿ ಮಂದಿರದ ಹತ್ತಿರ ಸಂಗಮ ನಾಲಾಕ್ಕೆ ಸೇರುವ ಬಳಿ ಸೇತುವೆ ನಿರ್ಮಿಸಲಾಗಿದೆ. ಇದರ ಅಡಿಪಾಯದ ಎತ್ತರ ಹೆಚ್ಚಿಸಿರುವುದು ಹಾಗೂ ಸೇತುವೆ ನಿರ್ಮಾಣದ ವೇಳೆ ಹಾಕಿದ ಮಣ್ಣು ತೆಗೆಯದಿರುವುದು ಈ ಅವಾಂತರಕ್ಕೆ ಕಾರಣವಾಗಿದೆ. ಸೇತುವೆ ನಿರ್ಮಾಣದ ವೇಳೆ ಮಂದಿರದ ಆಡಳಿತದವರ ಅಭಿಪ್ರಾಯ ಕೇಳಬೇಕಿತ್ತು ಎಂದು ಸ್ಥಳೀಯರು ಹೇಳುತ್ತಿದ್ದು, ಮಳೆಗಾಲದ ಪ್ರಾರಂಭದಲ್ಲಿಯೇ ಹೀಗಾದರೆ, ಮುಂದೆ ಏನಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನೀರು ಹೊರಹಾಕಲು ಹರಸಾಹಸ:ಸಂಗಮ ನಾಲಾ ಸಮುದ್ರ ಸೇರುವಲ್ಲಿನ ಕೋಡಿಯನ್ನು (ಮರಳ ದಿನ್ನೆ) ಮಂದಿರದ ಸಿಬ್ಬಂದಿ ಸತತ ಎರಡು ತಾಸಿಗೂ ಅಧಿಕ ಕಾಲ ಕಡಿದು ನೀರು ಸರಾಗವಾಗಿ ಹೋಗುವಂತೆ ಬಿಡಿಸಿಕೊಟ್ಟರು. ಸುರಿಯುವ ಮಳೆಯನ್ನೂ ಲೆಕ್ಕಿಸಿದೇ ಶ್ರಮಿಸಿ ಗರ್ಭಗುಡಿಯಲ್ಲಿ ನೀರು ಖಾಲಿ ಮಾಡಿದ್ದಾರೆ. ನಂತರ ಗರ್ಭಗುಡಿ ಸ್ವಚ್ಚಗೊಳಿಸಿ, ಮಹಾಪೂಜೆ ನೆರವೇರಿಸಲಾಯಿತು.
ಪ್ರವಾಸಿ ತಾಣದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇಷ್ಟು ದಿನ ಬಿಸಿಲಿನ ಬೇಗೆಗೆ ಬಳಲಿದ್ದ ಜನರಿಗೆ ಮಳೆ ತಂಪೆರೆದಿದೆ. ಪ್ರವಾಸಿಗರು ಸಹ ಏಕಾಏಕಿ ಬಂದ ಮಳೆಯಿಂದ ಕಂಗಾಲಾಗಿದ್ದು, ಛತ್ರಿ ರೇನ್‍ಕೋಟ್ ಅಂಗಡಿಗಳನ್ನು ಹುಡುಕುತ್ತ ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು. ಹಲವರು ಮಳೆಯಲ್ಲಿ ನೆನೆಯುತ್ತ ಅತ್ತಿತ್ತ ಓಡಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಇಲ್ಲಿನ ಮಹಾಗಣಪತಿ ಮಂದಿರದ ಮುಂಭಾಗ, ರಥಬೀದಿ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಚರಂಡಿ ನೀರು ಉಕ್ಕಿ ಹರಿದಿದ್ದು, ನದಿಯಾಗಿ ಮಾರ್ಪಟ್ಟಿತ್ತು. ಇದರಿಂದ ಸಂಚಾರಕ್ಕೆ ತೊಡಕು ಉಂಟಾಗಿತ್ತು.