ಮಳೆ ಅಬ್ಬರಕ್ಕೆ ಉತ್ತರ ಕನ್ನಡ ತತ್ತರ: ಗುಡ್ಡ ಕುಸಿತ, ನೆರೆಯಿಂದ ನಲುಗಿದ ಜನತೆ (ETV Bharat) ಕಾರವಾರ:ಉತ್ತರ ಕನ್ನಡ ಜಿಲ್ಲಾದ್ಯಂತ ಸೋಮವಾರ ವ್ಯಾಪಕವಾಗಿ ಮಳೆಯಾಗಿದೆ. ಭಾರೀ ಮಳೆಗೆ ಹಲವೆಡೆ ಗುಡ್ಡಗಳು ಕುಸಿದಿವೆ. ಕಾರವಾರದ ಚೆಂಡಿಯಾದಲ್ಲಿ ನೌಕಾನೆಲೆ ಕಾಮಗಾರಿಯಿಂದಾಗಿ ನೆರೆ ಸೃಷ್ಟಿಯಾಗಿ ಹಲವು ಮನೆಗಳಿಗೆ ನೀರು ನುಗ್ಗಿ, ಜನ ದಿನವಿಡೀ ಪರದಾಡುವಂತಾಯಿತು.
ಜಿಲ್ಲೆಯ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾನುವಾರದಿಂದ ಬಿಟ್ಟೂ ಬಿಡದೇ ಮಳೆಯಾಗುತ್ತಿದೆ. ಸೋಮವಾರವೂ ಬಿಟ್ಟುಬಿಡದೇ ಮಳೆಯಾಗಿದೆ. ಪರಿಣಾಮ ಹೊನ್ನಾವರದ ಖರ್ವಾ- ಯಲಗುಪ್ಪಾ ಬಳಿ ಬೆಂಗಳೂರು- ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 69ರ ಮೇಲೆ ಗುಡ್ಡು ಕುಸಿದು ಕೆಲ ಕಾಲದ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಮಣ್ಣನ್ನು ತೆರವು ಮಾಡಲಾಗಿದೆ.
ಕಾರವಾರದಲ್ಲಿ ಮಳೆ ಅಬ್ಬರಕ್ಕೆ ನಗರದ ಹಬ್ಬುವಾಡ ಫಿಶರೀಸ್ ಕಾಲೋನಿ ಬಳಿ ಮಾಜಿ ಯೋಧ ವಿನೋದ್ ಉಳ್ವೇಕರ್ ಎಂಬುವವರ ಮನೆಗೆ ಬಂಡೆಗಲ್ಲು ಉರುಳಿದ್ದು, ಗೋಡೆ ಹಾಗೂ ಮನೆಯ ವಸ್ತುಗಳಿಗೆ ಹಾನಿಯಾಗಿದೆ. ಬೆಳಗ್ಗೆ 5 ಗಂಟೆ ವೇಳೆ ಮನೆಯವರಿಗೆ ಬೃಹತ್ ಶಬ್ದ ಕೇಳಿದೆ. ಎದ್ದು ನೋಡಿದಾಗ ಗುಡ್ಡ ಸಹಿತ ಬೃಹತ್ ಬಂಡೆ ಉರುಳಿ ಬಿದ್ದಿದ್ದು, ಮನೆ ಸ್ಟೋರೇಜ್ ಕೊಠಡಿಗೆ ಹಾನಿಯಾಗಿದೆ. ಆ ಕೊಠಡಿಯಲ್ಲಿ ಯಾರೂ ಇರಲ್ಲಿಲ್ಲ. ಅಲ್ಲದೇ, ಮನೆಯ ಗೋಡೆಗೂ ಬಂಡೆ ಗಲ್ಲು ಉರುಳಿದ್ದು ಗೋಡೆಗೆ ಹಾನಿಯಾಗಿದೆ. ಜೊತೆಗೆ ಬೃಹತ್ ಮರ, ಕಲ್ಲು ಬಂಡೆಗಳು ಜಾರಿ ಬಂದು ಮನೆ ಬಳಿ ನಿಂತಿದ್ದು, ಯಾವ ಕ್ಷಣದಲ್ಲಾದರೂ ಉರುಳಿ ಬೀಳುವ ಆತಂಕ ಇದೀಗ ಮನೆಯವರಿಗೆ ಎದುರಾಗಿದೆ.
ಚೆಂಡಿಯಾದಲ್ಲಿ ಮನೆಗಳು ಜಲಾವೃತ:ತಾಲೂಕಿನ ಚೆಂಡಿಯಾ ಗ್ರಾಮ ಪ್ರವಾಹ ಎದುರಾಗಿದೆ. ನೌಕಾನೆಲೆಯ ಎರಡನೇ ಹಂತದ ಕಾಮಗಾರಿಯಿಂದಾಗಿ ಮಳೆ ನೀರು ಹರಿದು ಹೋಗದೇ ನೂರಾರು ಎಕರೆ ಪ್ರದೇಶದಲ್ಲಿ ಸಂಗ್ರಹವಾಗಿದೆ. ಚೆಂಡಿಯಾ ಸುತ್ತಮುತ್ತಲಿನ ಮನೆಗಳು ಜಲಾವೃತವಾಗಿವೆ. ಇದರಿಂದ ರೋಸಿ ಹೋದ ಸ್ಥಳೀಯರು ಗೇಟ್ ಬಳಿ ಜಮಾಯಿಸಿ ತೀವ್ರ ಆಕ್ರೋಶ ಹೊರಹಾಕಿದರು. ಈ ವೇಳೆ, ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು.
ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ:ಪ್ರವಾಹ ಹಿನ್ನೆಲೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಜಿಪಂ ಸಿಇಒ ಈಶ್ವರಕುಮಾರ್ ಕಾಂದೂ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಭೇಟಿ, ನೀಡಿ ಪರಿಶೀಲನೆ ನಡೆಸಿದರು. ಆಗ ಸ್ಥಳೀಯರು ತಮಗೆ ಆದ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಕಳೆದ ಹಲವು ವರ್ಷಗಳಿಂದ ಇದೇ ಹಳ್ಳದಲ್ಲಿ ಗುಡ್ಡದ ನೀರನ್ನು ಹರೆಯುತ್ತಿತ್ತು. ಇದೀಗ ಅಧಿಕಾರಿಗಳು ತಡೆಗೋಡೆ ನಿರ್ಮಾಣಕ್ಕಾಗಿ ಬಂದ್ ಮಾಡಿ ಪೈಪ್ ಅಳವಡಿಸಿದ್ದಾರೆ. ಆದರೆ, ಅದರಲ್ಲಿ ನೀರು ಹೋಗುತ್ತಿಲ್ಲ. ಇದರ ಪರಿಣಾಮ ನಮ್ಮ ಮನೆಗಳು ಜಲಾವೃತ ಆಗಿವೆ ಎಂದು ದೂರಿದರು. ಬಳಿಕ ಜಿಲ್ಲಾಧಿಕಾರಿ ನೌಕಾನೆಲೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಬಳಿಕ ಗ್ರಾಮಸ್ಥರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ''ನೀರು ಹೋಗುವ ಪ್ರದೇಶದಲ್ಲಿ ಅಳವಡಿಸಿದ ಪೈಪ್ ತೆರವು ಮಾಡಿ ನೀರು ಹರಿದುಹೋಗುವಂತೆ ಮಾಡಲು ಸೂಚಿಸಲಾಗಿದೆ. ಜೊತೆಗೆ ಗ್ರಾಮಕ್ಕೆ ನೀರು ಬರುವ ಪ್ರದೇಶಗಳಲ್ಲಿ ಮರಳಿನ ಚೀಲಗಳನ್ನು ಇಟ್ಟು ನೀರು ಬರದಂತೆ ತಡೆಯಲಾಗುತ್ತದೆ. ಸ್ಥಳೀಯ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ನೌಕಾನೆಲೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕ್ಕೊಳ್ಳಲು ಕ್ರಮವಹಿಸಲಗುವುದು'' ಎಂದು ತಿಳಿಸಿದರು.
ಪ್ರವಾಹ ಪೀಡಿತ ಪ್ರದೇಶಕ್ಕೆ ರೂಪಾಲಿ ನಾಯ್ಕ ಭೇಟಿ: ಕಾರವಾರ ತಾಲೂಕಿನ ನೆರೆ ಪೀಡತ ಪ್ರದೇಶಗಳಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಭೇಟಿ ನೀಡಿ, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.
ಕರಾವಳಿಯಲ್ಲಿ ಅತಿ ಹೆಚ್ಚು ಮಳೆ:ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ವರದಿಯಂತೆ ಕಳೆದ 24 ಗಂಟೆಯಲ್ಲಿ ಅಂಕೋಲಾದಲ್ಲಿ 79.1 ಮಿ.ಮೀ, ಭಟ್ಕಳದಲ್ಲಿ 83 ಹಳಿಯಾಳ 39.8 ಹೊನ್ನಾವರ 75.2, ಕಾರವಾರ 129.2, ಕುಮಟಾ 100.4, ಮುಂಡಗೋಡ 33.4, ಸಿದ್ದಾಪುರ 87.8, ಶಿರಸಿ 77.6, ಸೂಪಾ 94, ಯಲ್ಲಾಪುರ 49.2, ದಾಂಡೇಲಿ 54.1 ಮಿ.ಮೀ ಮಳೆಯಾಗಿದೆ. ಇನ್ನು ಜಿಲ್ಲೆಯಲ್ಲಿ ಒಟ್ಟು 77.4 ಮಿ.ಮೀ ಮಳೆಯಾಗಿದೆ.
ಕದ್ರಾ ಜಲಾಶಯದ ಪ್ರವಾಹದ ಮುನ್ನೆಚ್ಚರಿಕೆ:ಕಾಳಿನದಿ ಯೋಜನೆ 2ನೇ ಹಂತ ಕದ್ರಾ ಅಣೆಕಟ್ಟೆಗೆ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಕದ್ರಾ ಜಲಾಶಯದ ಗರಿಷ್ಠ ಮಟ್ಟವು 34.50 ಮೀಟರ್ಗಳಾಗಿದೆ. ಪ್ರಸ್ತುತ ಜಲಾಶಯದ ಮಟ್ಟವು 29.70 ಮೀಟರ್ ತಲುಪಿದೆ. ಜಲಾಶಯಕ್ಕೆ ಒಳಹರಿವಿನ ಪ್ರಮಾಣ 30,000 ಕ್ಯೂಸೆಕ್ ಇರುವುದರಿಂದ ಯಾವುದೇ ಸಮಯದಲ್ಲಿ ನೀರನ್ನು ಹೊರಬಿಡಲಾಗುವುದು. ಆದ್ದರಿಂದ ಸಾರ್ವಜನಿಕ ಸುರಕ್ಷತಾ ಹಿತದೃಷ್ಟಿಯಿಂದ ಅಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಹಾಗೂ ಪ್ರಾಣಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ದೋಣಿ ಸಂಚಾರ, ಮೀನುಗಾರಿಕೆ ಮತ್ತು ಇತರ ಚಟುವಟಿಕೆಗಳನ್ನು ನಡೆಸದಂತೆ ತಿಳಿಸಲಾಗಿದೆ ಎಂದು ಕದ್ರಾ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
10 ತಾಲೂಕಿನ ಶಾಲಾ - ಕಾಲೇಜುಗಳಿಗೆ ರಜೆ ವಿಸ್ತರಣೆ:ಜಿಲ್ಲಾದ್ಯಂತ ಮಳೆ ವ್ಯಾಪಕವಾಗಿ ಮುಂದುವರಿದ ಹಿನ್ನೆಲೆಯಲ್ಲಿ ಮತ್ತು ಜು.16ರಂದು ಕೂಡ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಕಾರಣ ಮಂಗಳವಾರ ಜಿಲ್ಲೆಯ ಮುಂಡಗೋಡ ಹಾಗೂ ಹಳಿಯಾಳ ತಾಲೂಕುಗಳನ್ನು ಹೊರತುಪಡಿಸಿ ಉಳಿದ ಎಲ್ಲ ತಾಲೂಕಿನ ಅಂಗನವಾಡಿ, ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಆದೇಶಿಸಿದ್ದಾರೆ.
ಇದನ್ನೂ ಓದಿ:ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಬೆಂಗಳೂರಲ್ಲಿ ದಿನಪೂರ್ತಿ ಜಿಟಿಜಿಟಿ ಮಳೆ - rain in Bengaluru