ಕರ್ನಾಟಕ

karnataka

ETV Bharat / state

ದಾವಣಗೆರೆ: ಧಾರಾಕಾರ ಮಳೆ, ಮನೆಗಳಿಗೆ ನುಗ್ಗಿದ ನೀರು; ಜನರ ಪರದಾಟ

ದಾವಣಗೆರೆ ಜಿಲ್ಲೆಯಲ್ಲಿ ರಾತ್ರಿಯಿಡೀ ಮಳೆಯಾಗಿದೆ. ದಾವಣಗೆರೆ, ಹರಿಹರ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

By ETV Bharat Karnataka Team

Published : 4 hours ago

rain
ದಾವಣಗೆರೆಯಲ್ಲಿ ಧಾರಾಕಾರ ಮಳೆ (ETV Bharat)

ದಾವಣಗೆರೆ:ಜಿಲ್ಲೆಯಲ್ಲಿ ರಾತ್ರಿಯಿಡೀ ವರುಣ ಅಬ್ಬರಿಸಿದ್ದಾನೆ. ಮಳೆ ಹೊಡೆತಕ್ಕೆ ನಗರ ಸೇರಿದಂತೆ ಜಿಲ್ಲೆಯ ಜನ ನಲುಗಿ ಹೋಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ರಾತ್ರಿಯಿಡೀ ಜನರು ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು.

ನಗರದ ಪಿಸಾಳೆ ಬಡಾವಣೆ, ಪಿಜೆ ಬಡಾವಣೆಯಲ್ಲಿ ಮನೆಗಳು ಜಲಾವೃತವಾಗಿವೆ. ಪಿಸಾಳೆ ಬಡಾವಣೆಯಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ನಿದ್ರೆ ಮಾಡಲಾಗದೆ, ರಾತ್ರಿಯಿಡೀ ನೀರನ್ನು ಹೊರಹಾಕುವುದರಲ್ಲೇ ತೊಡಗಿದ್ದರು. ಇನ್ನು ಮನೆ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ‌.

ದಾವಣಗೆರೆಯಲ್ಲಿ ಅಬ್ಬರಿಸಿದ ಮಳೆ (ETV Bharat)

ಹರಿಹರದಲ್ಲಿ ಮಳೆ ಅವಾಂತರ: ಹರಿಹರದಲ್ಲಿ ಬುಧವಾರ ರಾತ್ರಿ 7:30 ರಿಂದ ಆರಂಭವಾದ ಮಳೆ ಗುರುವಾರ ಬೆಳಗ್ಗೆ 9 ಗಂಟೆ ತನಕ ಸುರಿದಿದೆ. ಪರಿಣಾಮ ಇಲ್ಲಿನ ಕಾಳಿದಾಸ ನಗರ, ಬೆಂಕಿ ನಗರ, ಶಕ್ತಿ ನಗರದ ನೂರಕ್ಕೂ ಹೆಚ್ಚು ಮನೆಗಳಿಗೆ ತಡರಾತ್ರಿ ನೀರು ನುಗ್ಗಿ, ಮನೆಯಲ್ಲಿನ ದಿನಸಿ ವಸ್ತುಗಳು ಜಲಾವೃತವಾಗಿವೆ. ಜೊತೆಗೆ ಇಲ್ಲಿನ ಜನ ಮನೆ ಬಿಟ್ಟು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಕಾಳಜಿ ಕೇಂದ್ರ ಕೂಡ ತೆಗೆಯದ ಹಿನ್ನೆಲೆಯಲ್ಲಿ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರಿಹರದಲ್ಲಿ ಮಳೆ ಅವಾಂತರ (ETV Bharat)

ಏಕಾಏಕಿ ನೀರು ಬಂದಿದ್ದು ಹೇಗೆ!ಹರಿಹರದ ಕಾಳಿದಾಸ ನಗರ, ಬೆಂಕಿ ನಗರ, ಶಕ್ತಿ ನಗರದ ಕೂಗಳತೆ ದೂರದಲ್ಲಿ ಕಾಲುವೆ ಇದೆ. ದೇವರಬೆಳಕೆರೆ ಹಾಗೂ ಬಾತಿ ಗುಡ್ಡದಿಂದ ಹರಿದು ಬಂದು ಬಹುತೇಕ ನೀರು ಕಾಲುವೆಗೆ ನುಗ್ಗಿದೆ. ಅಮರಾವತಿ ಬಳಿ ಕಾಲುವೆಗೆ ಕೆಳಗೆ ಸೇತುವೆ ನಿರ್ಮಾಣ ಮಾಡಿದ್ದರಿಂದ ನೀರು ಸರಾಗವಾಗಿ ಹೋಗಲು ಅಡಚಣೆ ಆಗ್ತಿದೆ.‌ ಇದರಿಂದ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದರು.

ದಾವಣಗೆರೆಯಲ್ಲಿ ಧಾರಾಕಾರ ಮಳೆ (ETV Bharat)

ಕಾಳಿದಾಸ ನಗರದಲ್ಲಿರುವ ಕಿರಾಣಿ ಅಂಗಡಿಗೆ ಏಕಾಏಕಿ ಮಳೆ ನೀರು ನುಗ್ಗಿದ ಪರಿಣಾಮ ಅಂಗಡಿಯಲ್ಲಿದ್ದ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಅಂಗಡಿ ಮಾಲೀಕನಿಗೆ 30 ಸಾವಿರ ರೂ. ನಷ್ಟ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಮುಜೀಬುರ್ ರೆಹಮಾನ್ ಪ್ರತಿಕ್ರಿಯಿಸಿ "ಬೆಂಕಿನಗರ, ಕಾಳಿದಾಸ ನಗರ, ಶಕ್ತಿ ನಗರದ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಅವಾಂತರ ಸೃಷ್ಟಿ ಆಗಿದೆ. ಜನ ಮನೆ ಬಿಟ್ಟು ಸಂಬಂಧಿಕರ ಮನೆಗಳಿಗೆ ತೆರಳಿ ಆಶ್ರಯ ಪಡೆದಿದ್ದಾರೆ. ಅಮರಾವತಿ ಬಳಿ ರೈಲ್ವೆ ಬ್ರಿಡ್ಜ್ ಮೇಲೆ ಕಟ್ಬೇಕಾಗಿತ್ತು. ಸ್ವಲ್ಪ ಕೆಳಗೆ ಕಟ್ಟಿದ್ದರಿಂದ ಬಾತಿ ಗುಡ್ಡದಿಂದ ಕಾಲುವೆ ಮೂಲಕ ನೀರು ಬಂದು ಈ ರೀತಿ ಆಗಿದೆ" ಎಂದು ತಿಳಿಸಿದರು.

ಕಾಳಿದಾಸ ನಗರದ ಬಳಿ ಇರುವ ಕಾಲುವೆಗೆ ಅಡ್ಡಲಾಗಿ ನೀರು ಬಾರದಂತೆ ತಡೆಗೋಡೆ ನಿರ್ಮಾಣ ಆಗ್ಬೇಕಾಗಿದೆ ಎಂದು 10 ವರ್ಷಗಳಿಂದ ಸ್ಥಳೀಯರು ತಾಲೂಕು ಆಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ 200-400 ಬಡ ಕುಟುಂಬಗಳಿವೆ. ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸಂಬಂಧಿಸಿದವರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದರು.

"ನಾವು ಬಡವರು ಬಾಡಿಗೆ ಮನೆಯಲ್ಲಿ ಇರುವವರು, ನಮಗೆ ನಷ್ಟ ಆಗಿದೆ‌. ನೀರು ಏಕಾಏಕಿ ಬಂದಿದೆ‌, ದವಸಧಾನ್ಯ ನೆನೆದಿವೆ. ರಾತ್ರಿ ಇಡೀ ಮಳೆಯಾಗಿದೆ. ಮಕ್ಕಳಿಗೆ ಬೇರೆಯವರ ಮನೆಯಲ್ಲಿ ಆಶ್ರಯ ಕಲ್ಪಿಸಿದ್ದೇವೆ. ನೀರು ಹೆಚ್ಚಾಗಿ ಕಾಲುವೆ ಮೂಲಕ ನುಗ್ಗಿದೆ, ಪ್ರತಿವರ್ಷ ಇದೇ ಸಮಸ್ಯೆ ಆಗಿದೆ" ಎಂದು ಸ್ಥಳೀಯ ಶಿವಪ್ಪ ಅಳಲು ತೋಡಿಕೊಂಡರು.

ದಾವಣಗೆರೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿ, ನೀರು ತೆರವುಗೊಳಿಸಿದ್ದಾರೆ. ಚರಂಡಿಗಳು ತುಂಬಿ ಹರಿದು ತಗ್ಗು ಪ್ರದೇಶಕ್ಕೆ ನೀರು ನುಗ್ಗಿತ್ತು. ಈರುಳ್ಳಿ ಮಾರುಕಟ್ಟೆ, ಭಾರತ್ ಕಾಲೋನಿ ಸೇರಿ ಹಲವೆಡೆ ಜನರಿಗೆ ತೊಂದರೆ ಉಂಟಾಗಿದೆ. ಇದಲ್ಲದೆ, ನಗರದ ಬೇತೂರು ರಸ್ತೆ, ಹಳೇ ದಾವಣಗೆರೆ ಭಾಗದ ವಿವಿಧ ಬಡಾವಣೆಗಳಲ್ಲಿ ಚರಂಡಿ ನೀರು ಹರಿಯುವಿಕೆಗೆ ಅಡಚಣೆಯಾಗಿ, ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.

ಕಾಳಜಿ‌ ಕೇಂದ್ರಕ್ಕೆ ಜನರ ಸ್ಥಳಾಂತರ:ಜಿಲ್ಲೆಯ ಜಗಳೂರು ತಾಲೂಕಿನ ಜಿನಗಿ ಹಳ್ಳ ತುಂಬಿ ಹರಿಯುತ್ತಿದೆ. ಕೆರೆ ಕೋಡಿ ಹರಿದು ಹಿರೇಮಲ್ಲನಹೊಳೆ ಗ್ರಾಮವು ಜಲಾವೃತವಾಗಿದ್ದು, ಜನರಿಗೆ ಸಾಕಷ್ಟು ಸಮಸ್ಯೆ ತಲೆದೋರಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಸ್ಥರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.‌ ಕಾಳಜಿ‌ ಕೇಂದ್ರದಲ್ಲಿ 40 ಕುಟುಂಬಗಳು ಆಶ್ರಯ ಪಡೆದಿವೆ.

ಇದನ್ನೂ ಓದಿ:ಹಾವೇರಿ: ಭಾರಿ ಮಳೆಗೆ ನೀರಿನಲ್ಲಿ ಕೊಚ್ಚಿಹೋಗಿ 12 ವರ್ಷದ ಬಾಲಕ ಸಾವು

ABOUT THE AUTHOR

...view details