ಸುಬ್ರಹ್ಮಣ್ಯ (ದಕ್ಷಿಣ ಕನ್ನಡ):ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಕೆಲ ಗಂಟೆ ಕಾಲ ದಿಢೀರ್ ಗುಡುಗು ಸಹಿತ ಭಾರಿ ಮಳೆ ಸುರಿಯಿತು. ಇದರಿಂದ, ಇಲ್ಲಿನ ದರ್ಪಣ ತೀರ್ಥ ನದಿಯು ಪ್ರವಾಹ ಸದೃಶವಾಗಿ ತುಂಬಿ ಹರಿಯಿತು.
ರಭಸವಾಗಿ ಹರಿದ ನದಿಯ ನೀರು ಆದಿಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣಕ್ಕೆ ಪ್ರವೇಶಿಸಿತು. ಅಲ್ಲದೇ, ಅಲ್ಪ ಪ್ರಮಾಣದಲ್ಲಿ ಒಳ ಪ್ರವೇಶಿಸಿದ್ದು, ಕೆಲ ಹೊತ್ತಲ್ಲೇ ಸಂಪೂರ್ಣ ಪ್ರವಾಹ ಶಾಂತವಾಯಿತು.
ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಕಡಬ ತಾಲೂಕಿನಾದ್ಯಂತ ಭಾರೀ ಗುಡುಗು ಸಹಿತ ಮಳೆ ಅಬ್ಬರಿಸಿದೆ. ಸುಮಾರು ಒಂದು ತಾಸು ಅಧಿಕ ಸಮಯದವರೆಗೆ ಧಾರಾಕಾರ ವರ್ಷಧಾರೆ ಸುರಿಸಿದೆ. ವರುಣನ ಆರ್ಭಟದಿಂದ ಆದಿಸುಬ್ರಹ್ಮಣ್ಯದ ಕೆಲವು ಅಂಗಡಿಮುಂಗಟ್ಟುಗಳಿಗೂ ನೀರು ನುಗ್ಗಿತ್ತು.
ಹಳ್ಳದ ಮಧ್ಯೆ ಸಿಲುಕಿದ್ದವರ ರಕ್ಷಣೆ:ಇನ್ನೊಂದೆಡೆ,ಏಕಾಏಕಿ ಮಳೆಯಿಂದ 25 ಜನರು ಹಳ್ಳದ ಮಧ್ಯೆ ಸಿಲುಕಿದ್ದ ಘಟನೆ ಹಾವೇರಿಯಲ್ಲಿ ನಡೆಯಿತು. ಬಳಿಕ ಭಕ್ತರನ್ನು ರಕ್ಷಣೆ ಮಾಡಲಾಗಿದೆ. ಸವಣೂರು ತಾಲೂಕಿನ ಬರದೂರು ಗ್ರಾಮದ ಹೊರವಲಯದಲ್ಲಿರುವ ರಾಮಲಿಂಗ ಮಠದಲ್ಲಿ ಭಕ್ತರು ಅಪಾಯಕ್ಕೆ ಸಿಲುಕಿದ್ದರು.