ಬೆಂಗಳೂರು: ರಾಜಧಾನಿಯಲ್ಲಿ ಸತತ ವರುಣಾರ್ಭಟ ಮುಂದುವರಿದಿದಿದ್ದು, ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಹಲವೆಡೆ ಅವಾಂತರ ಸೃಷ್ಟಿಯಾಗಿ ನಾಗರಿಕರು ಪರದಾಡುವಂತಾಗಿದೆ. ಶನಿವಾರ ಕೂಡ ಧಾರಾಕಾರ ಮಳೆಯಿಂದ ಜನರು ತೊಂದರೆ ಅನುಭವಿಸಿದ್ದರು. ಭಾನುವಾರ ಸಂಜೆ 5.30ಕ್ಕೆ ಶುರುವಾದ ಬಿರುಗಾಳಿ, ಗುಡುಗು ಮಿಂಚುಸಹಿತ ಮಳೆಯು ತಡರಾತ್ರಿವರೆಗೂ ಸುರಿದಿರುವುದು ಸಾಕಷ್ಟು ಅವಘಡಗಳಿಗೆ ಕಾರಣವಾಗಿದೆ.
ನಿನ್ನೆ ರಾತ್ರಿ ಬಿದ್ದ ಭಾರೀ ಮಳೆಯಿಂದಾಗಿ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಸುಮಾರು 100ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಕ್ಷೇತ್ರದಲ್ಲಿ ಶಾಸಕ ಕೆ.ಗೋಪಾಲಯ್ಯ ಅಧಿಕಾರಿಗಳ ಜೊತೆ ಸಂಚರಿಸಿ, ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದರು.
ಸುಮಾರು 10ಕ್ಕೂ ಹೆಚ್ಚು ಕಡೆ ಮನೆಗಳ ಮೇಲೆ ಮರಗಳು ಬಿದ್ದಿದ್ದು, ಮನೆಯಲ್ಲಿದ್ದವರನ್ನು ಹೊರಗೆ ಕರೆತಂದಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಾಲಕ್ಷ್ಮೀ ಲೇಔಟ್‌ನ, ಕರ್ನಾಟಕ ಲೇಔಟ್, ಬೆಮೆಲ್ ಲೇಔಟ್, ಕಿರ್ಲೋಸ್ಕರ್ ಕಾಲೊನಿ ಹಾಗೂ ಕುರುಬರಹಳ್ಳಿ ಮೇನ್ ರೋಡ್, ಕಮಲ ನಗರದ ವಾಟರ್ ಟ್ಯಾಂಕ್ ಮುಖ್ಯರಸ್ತೆ ಮೊದಲಾದ ಕಡೆ ಹಲವು ಮರಗಳು ಉರುಳಿ ಬಿದ್ದಿವೆ. ಬೆಳಗ್ಗೆಯಿಂದ ತೆರವು ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಶಾಸಕರು ಖುದ್ದು ತೆರವು ನಡೆಯುತ್ತಿರುವ ಸ್ಥಳಗಳಲ್ಲಿ ಹಾಜರಿದ್ದು, ತೆರವು ಕಾರ್ಯವನ್ನು ಚುರುಕುಗೊಳಿಸಿದರು.
ಈ ಸಂಬಂಧ ಶಾಸಕರು ಮಾತನಾಡಿ, "ಮರಗಳ ತೆರವು ಕಾರ್ಯ ಮಾಡುವ ಸಿಬ್ಬಂದಿಯ ಕೊರತೆ ಇದ್ದು, ಇನ್ನಷ್ಟು ಸಿಬ್ಬಂದಿಯನ್ನು ಬಿಬಿಎಂಪಿ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು. ಆದಷ್ಟು ಬೇಗ ಸಿಎಂ ಸಿದ್ದರಾಮಯ್ಯ ಮಳೆ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ನೀಡಬೇಕು" ಎಂದು ಒತ್ತಾಯಿಸಿದರು.
ಇನ್ನೂ ಐದು ದಿನ ಮಳೆ:ನಗರದಲ್ಲಿ ಸುರಿಯುತ್ತಿರುವ ಮಳೆ ಮುಂದಿನ 5 ದಿನ ಇನ್ನಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ. ಜೂ.3 ಮತ್ತು 5ರಿಂದ ಎರಡು ದಿನಗಳು ಭಾರೀ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕಳೆದ ಎರಡು ದಿನಗಳಲ್ಲಿ ಉದ್ಯಾನನಗರಿಯಲ್ಲಿ ವಾಡಿಕೆಗಿಂತ ಹೆಚ್ಚು ಪ್ರಮಾಣದ ವರ್ಷಧಾರೆಯಾಗಿದೆ.