ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರುನಲ್ಲಿ ಇಂದು ಸಂಜೆ ಗುಡುಗುಸಹಿತ ಜೋರು ಮಳೆಯಾಗಿದೆ. ಹಲವೆಡೆ ಮರ, ರೆಂಬೆ, ಕೊಂಬೆಗಳು ನೆಲಕ್ಕುರುಳಿವೆ. ಬನಶಂಕರಿ, ಕುಮಾರಸ್ವಾಮಿ ಲೇಔಟ್, ಎಳಚೇನಹಳ್ಳಿ, ಉತ್ತರಹಳ್ಳಿ, ಪದ್ಮನಾಭನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆಯಾದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.
ಕಸ್ತೂರಿ ನಗರ ಕಡೆಯಿಂದ ಎಂಎಂಟಿ ಜಂಕ್ಷನ್‌ನಿಂದ ಕೆ.ಆರ್.ಪುರ ಕಡೆಗೆ ಹೋಗುವ ಮಾರ್ಗದಲ್ಲಿ ಎಂಎಂಟಿ ಬಸ್ ನಿಲ್ದಾಣದ ಹತ್ತಿರ ಮಳೆ ನೀರು ನಿಂತಿರುವುದರಿಂದ ವೈಟ್‌ಫೀಲ್ಡ್, ಮಹದೇವಪುರ ಕಡೆಗೆ ಹೋಗುವ ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಇದರೊಂದಿಗೆ ಜಯಮಹಲ್ ಮುಖ್ಯರಸ್ತೆ ಬಳಿ ನೀರು ನಿಂತಿತ್ತು. ಟಿನ್ ಫ್ಯಾಕ್ಟರಿ ಕಡೆಯಿಂದ ಕಸ್ತೂರಿ ನಗರ ಕಡೆಗೆ ಹೋಗುವ ಮಾರ್ಗದಲ್ಲಿ ನೀರು ನಿಂತು ರಾಮಮೂರ್ತಿ ನಗರದ ಕಡೆಗೆ ಹೋಗುವ ವಾಹನ ಸವಾರರಿಗೆ ಸಮಸ್ಯೆ ಎದುರಾಯಿತು. ಒಆರ್‌ಆರ್ ರಸ್ತೆ, ಬೆನ್ನಿಗಾನಹಳ್ಳಿ ರೈಲ್ವೆ ಮೇಲ್ಸೇತುವೆ, ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ, ಕೆಆರ್ ವೃತ್ತ, ಎಂಜಿ ರಸ್ತೆ, ಕೆಆರ್ ಮಾರುಕಟ್ಟೆ, ವೈಟ್‌ಫೀಲ್ಡ್ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಆಯಿತು.
ಮೆಟ್ರೋ ರೈಲು ಸೇವೆ ತಾತ್ಕಾಲಿಕ ಸ್ಥಗಿತ:ಭಾರೀ ಮಳೆಯಿಂದಾಗಿ ಮರದ ಕೊಂಬೆಗಳು ಎಂಜಿ ರಸ್ತೆ ಮತ್ತು ಟ್ರಿನಿಟಿ ನಿಲ್ದಾಣಗಳ ನಡುವಿನ ವಯಡಕ್ಟ್ ಟ್ರ್ಯಾಕ್‌ನಲ್ಲಿ ಬಿದ್ದಿವೆ. ಇದರಿಂದ ಎಂಜಿ ರಸ್ತೆ ಮತ್ತು ಇಂದಿರಾನಗರ ನಡುವೆ ಮೆಟ್ರೋ ರೈಲು ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಆದಾಗ್ಯೂ, ನೇರಳೆ ಮಾರ್ಗದ ಇಂದಿರಾನಗರ ಮತ್ತು ವೈಟ್‌ಫೀಲ್ಡ್ ಹಾಗೂ ಚಲ್ಲಘಟ್ಟ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಶಾರ್ಟ್ ಲೂಪ್‌ಗಳು ಚಾಲನೆಯಲ್ಲಿದೆ ಎಂದು ನಮ್ಮ ಮೆಟ್ರೋ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀವಾಸ್ ರಾಜಗೋಪಾಲನ್ ಮಾಹಿತಿ ನೀಡಿದ್ದಾರೆ.