ಬೆಂಗಳೂರು :ಬೇಸಿಗೆ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ನಗರದಲ್ಲಿ ಗುಡುಗು ಸಿಡಿಲಿನೊಂದಿಗೆ ಭಾರಿ ಮಳೆಯಾಗಿದೆ. ಒಂದು ವಾರದಲ್ಲಿ ನಾಲ್ಕು ದಿನ ಮಳೆಯಾಗಿದೆ. ಬುಧವಾರ ಕೂಡ ಸುರಿದ ಮಳೆ ನಗರದಲ್ಲಿ ಅವಾಂತರವನ್ನೇ ಸೃಷ್ಟಿಸಿದೆ.
ಮೆಜೆಸ್ಟಿಕ್, ಕೆ. ಆರ್ ಮಾರ್ಕೆಟ್, ಜಯನಗರ, ಜೆಜೆಆರ್ ನಗರ, ಟೌನ್ ಹಾಲ್ ಸುತ್ತಮುತ್ತ ಭಾರಿ ಮಳೆ ಬಿದ್ದಿದೆ. ಸದಾಶಿವ ನಗರ, ಪ್ಯಾಲೇಸ್ ಗುಟ್ಟಹಳ್ಳಿ, ಮಲ್ಲೇಶ್ವರ, ವೈಯಾಲಿಕಾವಲ್, ಅರಮನೆ ಮೈದಾನ, ಶೇಷಾದ್ರಿಪುರ, ಯಶವಂತಪುರ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ. ವಿಧಾನಸೌಧ, ಕೆ. ಆರ್ ಸರ್ಕಲ್, ಕಾರ್ಪೋರೇಷನ್, ಟೌನ್ ಹಾಲ್ ಸುತ್ತಮುತ್ತ ಗುಡುಗು, ಮಿಂಚು ಸಹಿತ ಜೋರು ಮಳೆ ಬಿದ್ದಿದೆ.
ನಗರದ ಹಲವು ಕಡೆ ಮರಗಳು ಧರೆಗುರುಳಿವೆ. ಹಲವು ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇನ್ನೂ ಕೆಲವು ಕಡೆ ವಾಹನ ದಟ್ಟಣೆ ಉಂಟಾಗಿತ್ತು. ಸಂಜೆ ಆಫೀಸ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಜನರು ಮಳೆಯಲ್ಲಿ ಸಿಲುಕಿ ಒದ್ದಾಡಿದರು. ಕೆಲವರು ಅಲ್ಲಲ್ಲಿ ಅಂಗಡಿಗಳ ಮುಂದೆ ನಿಂತು ಮಳೆಯಿಂದ ರಕ್ಷಣೆ ಪಡೆದರು.