ಕರ್ನಾಟಕ

karnataka

ETV Bharat / state

ಉತ್ತರ ಕನ್ನಡದಲ್ಲಿ ಧಾರಾಕಾರ ಮಳೆ: ಉಕ್ಕಿದ ನದಿಗಳು, ಹಲವೆಡೆ ಸಂಚಾರ ಬಂದ್ - Uttara Kannada Rain

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರೆದಿದೆ. ನದಿಗಳು, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ ಗುಡ್ಡ ಕುಸಿತ, ಮನೆಗಳಿಗೆ ನೀರು ನುಗ್ಗಿದ ಘಟನೆಗಳೂ ನಡೆದಿವೆ.

By ETV Bharat Karnataka Team

Published : Jul 4, 2024, 5:03 PM IST

HEAVY RAIN
ಉತ್ತರ ಕನ್ನಡದಲ್ಲಿ ಧಾರಾಕಾರ ಮಳೆ (ETV Bharat)

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆ (ETV Bharat)

ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜೋರು ಮಳೆ ಸುರಿಯುತ್ತಿದೆ. ಕುಮಟಾದ ಚಂಡಿಕಾ ನದಿ, ಹೊನ್ನಾವರದಲ್ಲಿ ಗುಂಡಬಾಳ ಹೊಳೆ ಉಕ್ಕಿ ಹರಿಯುತ್ತಿದೆ. ಹೊನ್ನಾವರದ ವರ್ನಕೇರಿ ಸಮೀಪದ ಬೆಂಗಳೂರು-ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದೆ. ಹಲವು ಹೆದ್ದಾರಿ ಸಂಪರ್ಕಗಳು ಕಡಿತಗೊಂಡಿವೆ. ಚಿಕ್ಕನಕೋಡ್ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನ ಬಹುತೇಕ ತಾಲೂಕುಗಳಲ್ಲಿ ಬುಧವಾರದಿಂದ ಬಿಟ್ಟುಬಿಟ್ಟು ಸುರಿಯುತ್ತಿರುವ ಮಳೆ ಗುರುವಾರವೂ ಸುರಿಯಲಾರಂಭಿಸಿದೆ.

ಚಂಡಿಕಾ ನದಿ ರಾಷ್ಟ್ರೀಯ 766ಇ ಹೆದ್ದಾರಿಯಲ್ಲಿ ಸೇತುವೆ ಮೇಲೆ ಉಕ್ಕಿ ಹರಿಯುತ್ತಿದ್ದು, ಶಿರಸಿ-ಕುಮಟಾ ಸಂಪರ್ಕ ಕಡಿತಗೊಂಡಿದೆ. ಉಕ್ಕಿ ಹರಿಯುವ ನೀರಿನಲ್ಲಿಯೇ ಖಾಸಗಿ ಬಸ್ ಅನ್ನು ದಾಟಿಸಲು ಮುಂದಾದಾಗ ಅರ್ಧದಲ್ಲಿಯೇ ಸಿಲುಕಿಕೊಂಡಿತು. ಪ್ರಯಾಣಿಕರನ್ನು ದೋಣಿ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಎರಡು ಬದಿ ಸಂಪರ್ಕ ಸಾಧ್ಯವಾಗದ ಕಾರಣ ಮುಂಜಾನೆಯಿಂದಲೇ ವಾಹನಗಳು ಸಾಲುಗಟ್ಟಿದ್ದು ಕೆಲವು ಸವಾರರು ವಾಪಸ್ ತೆರಳಿದ್ದಾರೆ.

ಭಾರೀ ಮಳೆಗೆ ಹೊನ್ನಾವರ ತಾಲೂಕಿನ ವರ್ನಕೇರಿ ಗ್ರಾಮದ ಬಳಿ ಗುಡ್ಡ ಕುಸಿದು ಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಮಳೆಗೆ ಬಂಡೆ, ಗಿಡಮರಸಹಿತ ಗುಡ್ಡ ಕುಸಿದಿದ್ದು, ಸಂಚಾರ ಸ್ಥಗಿತಗೊಂಡಿದೆ‌‌. ಇದೀಗ ಹೆದ್ದಾರಿಯಲ್ಲಿ ಕುಸಿದಿರುವ ಮಣ್ಣು ತೆರವುಗೊಳಿಸಲು ಸ್ಥಳೀಯಾಡಳಿತ ಮುಂದಾಗಿದೆ.

ಶಾಲೆಗಳಿಗೆ ರಜೆ:ಹೊನ್ನಾವರದ ಗುಂಡಬಾಳ ನದಿಯಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗಿದ್ದು, ಮುಂಜಾಗ್ರತಾ ಕ್ರಮವಾಗಿ ನದಿಪಾತ್ರದ ಗ್ರಾಮಗಳ ಶಾಲೆಗೆ ಸ್ಥಳೀಯಾಡಳಿತದ ಕೋರಿಕೆ ಮೇರೆಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ರಜೆ ಘೋಷಿಸಿದ್ದಾರೆ. ಇಲ್ಲಿನ ಅನಿಲಗೋಡ್ ಜನತಾ ವಿದ್ಯಾಲಯ, ಹಿರಿಯ ಪ್ರಾಥಮಿಕ ಶಾಲೆ, ಗುಂಡಬಾಳ ಶಾಲೆ ನಂ-2, ಗುಂಡಿಬೈಲ್ ಶಾಲೆ ನಂ-2, ವಲ್ಕಿಯ ಹುಡ್ಗೋಡ ಇಟ್ಟಿಹಾದ ಪಬ್ಲಿಕ್ ಸ್ಕೂಲ್, ಗಂಜಿಗೆರೆ ಕಿರಿಯ ಪ್ರಾಥಮಿಕ ಶಾಲೆಗಳಿಗೆ ರಜೆ ನೀಡಲಾಗಿದೆ.

ಸ್ಥಳಾಂತರಕ್ಕೆ ಸೂಚನೆ: ಗುಂಡಬಾಳ ನದಿಯಲ್ಲಿ ನೆರೆ ಪ್ರವಾಹದಿಂದ ಚಿಕ್ಕನಕೋಡ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಿಜನಕೇರಿ, ಹಿತ್ತಲಕೇರಿ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಘನಾಶಿನಿ ನದಿ ನೀರಿನ ಹರಿವು ಕೂಡ ತೀವ್ರವಾಗಿದ್ದು, ನೀರು ನದಿಯ ಮಟ್ಟಕ್ಕಿಂತ ಮೇಲೆ ಬರುತ್ತಿದೆ. ನದಿಪಾತ್ರದ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇರುವ ಕಾರಣ ಐಗಳಕುರ್ವೆ ಗ್ರಾಮದ ಸಾರ್ವಜನಿಕರಿಗೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ.

ಪ್ರವಾಸಿಗರಿಗೆ ನಿಷೇಧ: ಯಲ್ಲಾಪುರ ತಾಲೂಕಿನಲ್ಲಿಯೂ ಅಬ್ಬರದ ಮಳೆಯಾಗುತ್ತಿದ್ದು, ಗಂಗಾವಳಿ ನದಿ ನೀರಿ‌ನ ಪ್ರಮಾಣ ಕೂಡ ಹೆಚ್ಚಳವಾಗಿದೆ. ಪ್ರವಾಸಿಗರ ಸುರಕ್ಷತೆಯ ಕಾರಣದಿಂದ ಯಲ್ಲಾಪುರ ತಾಲೂಕಿನ ಶಿರಲೆ ಫಾಲ್ಸ್, ಕಾನೂರು ಫಾಲ್ಸ್, ಕುಳಿ ಮಾಗೋಡು ಫಾಲ್ಸ್​​ಗಳಲ್ಲಿ ಪ್ರವಾಸಿಗರ ವೀಕ್ಷಣೆಗೆ ಅರಣ್ಯ ಇಲಾಖೆ ನಿಷೇಧ ಹೇರಿದೆ. ಈ ಬಗ್ಗೆ ಅರಣ್ಯ ಇಲಾಖೆಯಿಂದ ನಿಷೇಧ ಫಲಕ ಹಾಕಿ ಸೂಚನೆ ನೀಡಲಾಗಿದೆ.

ಅಪ್ಪರ್ ಕಾನೇರಿ ಆಣೆಕಟ್ಟೆ- ಪ್ರವಾಹದ ಮುನ್ನೆಚ್ಚರಿಕೆ: ಕಾಳಿ ನದಿ ಜಲ ವಿದ್ಯುತ್ ಹಂತ-1 ಯೋಜನೆಯ ಅಪ್ಪರ್ ಕಾನೇರಿ ಆಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಅಪ್ಪರ್ ಕಾನೇರಿ ಆಣೆಕಟ್ಟೆಯ ಜಲಾಶಯದ ನೀರಿನ ಮಟ್ಟವು ಸತತವಾಗಿ ಏರುತ್ತಿದೆ. ಜಲಾಶಯದ ಗರಿಷ್ಟ ಮಟ್ಟವು 615.50 ಮೀಟರ್‌ಗಳಿದ್ದು ಜು.4 ರಂದು 605.85 ಮೀಟರ್ ನೀರು ತುಂಬಿದೆ.

ಇದೇ ರೀತಿ ಜಲಾಶಯಕ್ಕೆ ನೀರಿನ ಒಳಹರಿವು ಮುಂದುವರಿದಲ್ಲಿ ಕಡಿಮೆ ಜಲಸಂಗ್ರಹಣ ಸಾಮರ್ಥ್ಯವುಳ್ಳ ಅಪ್ಪರ್ ಕಾನೇರಿ ಜಲಾಶಯದ ಗರಿಷ್ಠ ಮಟ್ಟವು ಶೀಘ್ರದಲ್ಲಿಯೇ ತುಂಬುವ ಸಾಧ್ಯತೆ ಇರುವುದರಿಂದ ಆಣೆಕಟ್ಟಿನ ಸುರಕ್ಷತೆಗಾಗಿ ಹೆಚ್ಚುವರಿಯಾದ ಜಲಾಶಯದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುತ್ತದೆ. ಆಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ದಂಡೆಯ ಪಾತ್ರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕೆಂದು ಈ ಮೂಲಕ ಎಚ್ಚರಿಸಲಾಗಿದೆ. ಆಣೆಕಟ್ಟೆಯ ಕೆಳಭಾಗದ ನದಿಯ ಪಾತ್ರದಲ್ಲಿ ದೋಣಿ ಸಂಚಾರ, ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ಮಳೆಗಾಲದ ಅವಧಿಯಲ್ಲಿ ನಡೆಸದಂತೆ ಸೂಚಿಸಲಾಗಿದೆ.

ಇದನ್ನೂ ಓದಿ:ಭಾರೀ ಮಳೆ; ಬೆಳ್ತಂಗಡಿ, ಬಂಟ್ವಾಳ, ಬೈಂದೂರು ಶಾಲೆಗಳಿಗೆ ರಜೆ ಘೋಷಣೆ - Holiday for Schools

ABOUT THE AUTHOR

...view details