ಬೆಂಗಳೂರು:ಎಲ್ ನಿನೋ ಪ್ರಭಾವ ದುರ್ಬಲಗೊಳ್ಳದ ಹಿನ್ನೆಲೆಯಲ್ಲಿ ಕರ್ನಾಟಕದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಬಿಸಿ ಗಾಳಿ (ಹೀಟ್ ವೇವ್) ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಹೀಟ್ ವೇವ್ ಕಾರಣದಿಂದ ಕಲಬುರಗಿ, ಬಾಗಲಕೋಟೆ, ರಾಯಚೂರು, ವಿಜಯಪುರ, ಯಾದಗಿರಿ, ಕೊಪ್ಪಳ, ವಿಜಯಪುರ, ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲಿ ಮೂರು ದಿನ ತಾಪಮಾನ ಕೂಡ ಹೆಚ್ಚಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಉಳಿದಂತೆ, ಮಾರ್ಚ್ ತಿಂಗಳಿನಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಬಳ್ಳಾಪುರ ಹಾಗೂ ಹಾಸನ ಜಿಲ್ಲೆಗಳಲ್ಲಿ ಸರಿಸುಮಾರು 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ವಾಡಿಕೆಗಿಂತ 1.8 ಡಿಗ್ರಿ ಸೆಲ್ಸಿಯಸ್ ಅಧಿಕ ಉಷ್ಣಾಂಶ ಇದಾಗಿದೆ. ಬಾಗಲಕೋಟೆ, ತುಮಕೂರಿನಲ್ಲಿ 40 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇದು ವಾಡಿಕೆಗಿಂತ 4.5 ಡಿಗ್ರಿ ಹೆಚ್ಚಾಗಿದೆ. ಮಂಡ್ಯ, ಕೊಪ್ಪಳ, ಕಲಬುರಗಿ, ಗದಗ, ಬಳ್ಳಾರಿ, ದಾವಣಗೆರೆ, ಉತ್ತರ ಕನ್ನಡ, ಉಡುಪಿ, ಹಾವೇರಿಯಲ್ಲಿಯೂ 2 ಡಿಗ್ರಿ ತಾಪಮಾನ ಹೆಚ್ಚಾಗಿ ದಾಖಲಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸದ್ಯ ಪೆಸಿಫಿಕ್ ಸಮುದ್ರದ ಪೂರ್ವ ಭಾಗದಲ್ಲಿ ಸಮುದ್ರದ ನೀರಿನ ಉಷ್ಣಾಂಶ ಜಾಸ್ತಿಯಾಗಿದೆ. ಮೇ ಅಥವಾ ಜೂನ್ನಲ್ಲಿ ಎಲ್ನಿನೋ ಸಂಪೂರ್ಣ ಪ್ರಭಾವ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಎ.ಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಉಷ್ಣತೆ: ಕಲಬುರಗಿಯಲ್ಲಿ ದಾಖಲಾಯ್ತು ಗರಿಷ್ಠ ತಾಪಮಾನ! - Temperature increase