ಬೆಂಗಳೂರು:10 ವರ್ಷಗಳಲ್ಲಿ ಅಚ್ಛೆ ದಿನಗಳನ್ನು ತರದೇ ಈಗ 2047ರ ವರೆಗೆ ಸಮಯ ಕೇಳುತ್ತಿರುವ ಮೋದಿಯವರಿಗೆ ಯಾವ ನೈತಿಕತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮೋದಿಯವರು ಮೊದಲು 5 ವರ್ಷ ಕೇಳಿದ್ದರು. ಆದರೆ ಅವರು ಅಧಿಕಾರಕ್ಕೇರಿ 10 ವರ್ಷಗಳೇ ಕಳೆದಿವೆ. ಈಗ ಮತ್ತೆ 23 ವರ್ಷ ಸಮಯ ಕೇಳ್ತಿದ್ದಾರೆ. ಅಂದರೆ 10 ವರ್ಷಗಳಲ್ಲಿ ಜನರ ಬದುಕಿನಲ್ಲಿ ಅಚ್ಛೆ ದಿನಗಳು ಬರಲಿಲ್ಲ ಎಂಬುದನ್ನ ಮೋದಿಯವರೇ ಒಪ್ಪಿಕೊಂಡಂತಾಗಿದೆ ಎಂದು ಟೀಕಿಸಿದರು.
ಮೊದಲು 10 ವರ್ಷಗಳಲ್ಲಿ ಮಾಡಿದ್ದೇನು? ಎಂಬುದನ್ನು ಜನರ ಮುಂದಿಟ್ಟು ಮೋದಿಯವರು ಮತ ಕೇಳಲಿ. ದೇಶದ ಬಡವರಿಗೆ ಇವರು ಒಂದು ರೂಪಾಯಿ ಕೂಡ ಹೆಚ್ಚಿಗೆ ಕೊಟ್ಟಿಲ್ಲ. ಕರ್ನಾಟಕ ರಾಜ್ಯವನ್ನಂತೂ ಸಂಪೂರ್ಣ ಕಡೆಗಣಿಸಿದ್ದಾರೆ. ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯದ ನೈಜ ಪ್ರಶ್ನೆಗಳಿಗೆ ಒಂದಕ್ಕೂ ಮೋದಿಯವರು ಉತ್ತರ ಕೊಟ್ಟಿಲ್ಲ. ನಾಳೆ ಅಮಿತ್ ಶಾ ಅವರು ರಾಜ್ಯಕ್ಕೆ ಬರ್ತಿದ್ದಾರೆ. ಅಮಿತ್ ಶಾ ಅವರಾದರೂ ಅಂಕಿ ಅಂಶಗಳ ಸಮೇತ ಉತ್ತರಿಸಲಿ ಎಂದು ದಿನೇಶ್ ಗುಂಡೂರಾವ್ ಸವಾಲು ಹಾಕಿದರು.
ಆಯುಷ್ಮಾನ್ಗೆ ಶೇ. 70ರಷ್ಟು ಹಣ ನೀಡಿದ್ದು ಕರ್ನಾಟಕ ಸರ್ಕಾರ: ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ಮೋದಿಯವರು ಹೇಳ್ತಾರೆ. ನೈಜವಾಗಿ ಇದು ಆರೋಗ್ಯ ಕರ್ನಾಟಕ ಯೋಜನೆ. ಅದನ್ನೇ ಅವರು ಆಯುಷ್ಮಾನ್ ಭಾರತ್ ಎಂದು ನಾಮಕರಣ ಮಾಡಿಕೊಂಡರು. ವಾಸ್ತವವಾಗಿ ನೋಡಿದರೆ ಆಯುಷ್ಮಾನ್ ಭಾರತ್ ಯೋಜನೆಗೆ ಶೇ 70 ರಷ್ಟು ಹಣ ಕೊಡುತ್ತಿರುವುದು ಕರ್ನಾಟಕ ಸರ್ಕಾರ. ಕೇಂದ್ರದಿಂದ ಬರುತ್ತಿರುವುದು ಕೇವಲ 30 ರಷ್ಟು ಮಾತ್ರ. ಇಲ್ಲಿಯವರೆಗೆ ಆಯುಷ್ಮಾನ್ ಭಾರತ್ ಯೋಜನೆಯಡಿ 1920 ಕೋಟಿ ಮಾತ್ರ ಕೇಂದ್ರದಿಂದ ಬಂದಿದೆ. ಆದರೆ 4790 ಕೋಟಿ ಹಣವನ್ನು ರಾಜ್ಯ ಸರ್ಕಾರವೇ ಭರಿಸಿದೆ. ಶೇ 70 ರಷ್ಟು ಹಣವನ್ನು ನಾವೇ ಕೊಡುತ್ತಿದ್ದೇವೆ. ಕರ್ನಾಟಕಕ್ಕೆ ಮೋದಿಯವರ ಕೊಡುಗೆ ಏನು ಎಂದು ಅವರು ಪ್ರಶ್ನಿಸಿದರು.
ವೃದ್ಧಾಪ್ಯ ವೇತನ, ವಿಕಲಚೇತನರಿಗೆ ವೇತನಗಳನ್ನ ಮೋದಿಯವರು ಒಂದು ರೂಪಾಯಿ ಕೂಡ ಹೆಚ್ಚು ಮಾಡಿಲ್ಲ. ವೃದ್ಧಾಪ್ಯ ವೇತನದಲ್ಲಿ ರಾಜ್ಯ ಸರ್ಕಾರದ್ದು 400 ರೂ. ಕೇಂದ್ರದ್ದು 200 ರೂಪಾಯಿ ಮಾತ್ರ. ವಿಧವಾ ವೇತನ ಕೇಂದ್ರದ್ದು 500 ರಾಜ್ಯದ್ದು 700ರೂ. ವಿಕಲಚೇತನ ಕೇಂದ್ರದ್ದು 300, ರಾಜ್ಯದ್ದು 3900 ರೂ. ಸಂಧ್ಯಾ ಸುರಕ್ಷಾ ಕೇಂದ್ರದ್ದು ಶೂನ್ಯ. ನಮ್ಮದು 1200. ಮನಸ್ವಿನಿ ಯೋಜನೆ ಕೇಂದ್ರದ್ದು ಶೂನ್ಯ. ನಮ್ಮದು ₹ 800. ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ ರಾಜ್ಯ ಸರ್ಕಾರ 2000 ರೂ ನೀಡುತ್ತಿದೆ. ಕೇಂದ್ರದಿಂದ ಯಾವುದೇ ನೆರವು ಸಿಗುತ್ತಿಲ್ಲ. ಬಡವರಿಗೆ ಅಕ್ಕಿಯನ್ನು 30 ರೂ.ದಿಂದ 3 ರೂ. ಕೊಡುವ ತೀರ್ಮಾನವನ್ನ ಫುಡ್ ಸೆಕ್ಯುರಿಟಿ ಕಾಯ್ದೆ ತಂದಿದ್ದು ಹಿಂದಿನ ಯುಪಿಎ ಸರ್ಕಾರ. 3 ರೂಪಾಯಿಯನ್ನು ಕಡಿಮೆ ಮಾಡಿ ಅದೇ ದೊಡ್ಡ ಯೋಜನೆ ಎಂದು ಮೋದಿಯವರು ಹೇಳಿಕೊಳ್ಳುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.