ಕಾರವಾರ (ಉತ್ತರಕನ್ನಡ):ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಹಟ್ಟಿಕೇರಿ ಬಳಿ ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅಂಕೋಲಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸಂತೋಷ ಲಮಾಣಿ ಅವರನ್ನು ಅಮಾನತು ಮಾಡಲಾಗಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಆದೇಶ ಹೊರಡಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರವಾರದ ಕಡೆಯಿಂದ ಬರುತ್ತಿದ್ದ ಕಾರನ್ನು ಪೊಲೀಸರು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ 80,905 ರೂಪಾಯಿ ಮೌಲ್ಯದ ಗೋವಾ ಮದ್ಯ ದೊರೆತಿತ್ತು. ಪ್ರಕರಣ ಸಂಬಂಧ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಾಂಡವಪುರ ಮೂಲದ ದಿವಾಕರ ಆರ್.ಈರಯ್ಯ (33) ಮತ್ತು ಮಾದೇವ ಕೆ.ಕೃಷ್ಣಪ್ಪ (40) ಎಂಬವರನ್ನು ಬಂಧಿಸಲಾಗಿದೆ.
ಎಸ್ಪಿ ಆದೇಶದ ವಿವರ:ಆರೋಪಿಗಳು ಈ ಹಿಂದೆ ಮದ್ಯ ಸಾಗಾಟ ಪ್ರಕರಣವೊಂದರಲ್ಲಿ ಸಿಕ್ಕಿ ಬಿದ್ದಿದ್ದ ಹಳಿಯಾಳ ಪೊಲೀಸ್ ಠಾಣೆಯ ಸಂತೋಷ ಲಮಾಣಿ ಹೆಸರನ್ನು ಹೇಳಿದ್ದಾರೆ. ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ಗೋವಾ ಅಕ್ರಮ ಸಾರಾಯಿ ಸಾಗಾಟ ಪ್ರಕರಣದಲ್ಲಿ ಗೋಕರ್ಣ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಇದೀಗ ಮತ್ತೆ ಹೆಡ್ ಕಾನ್ಸ್ಟೇಬಲ್ ಅಣತಿ ಮೇರೆಗೆ ಅಕ್ರಮ ಗೋವಾ ಮದ್ಯ ಸಾಗಾಟ ಮಾಡುತ್ತಿರುವ ಬಗ್ಗೆ ಬಂಧಿತ ಆರೋಪಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಡ್ ಕಾನ್ಸ್ಟೇಬಲ್ ಸಂತೋಷರನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್ಪಿ ಆದೇಶದಲ್ಲಿ ತಿಳಿಸಿದ್ಧಾರೆ.