ಬೆಂಗಳೂರು : ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಿದ್ಧತೆ, ಅಭ್ಯರ್ಥಿ ಆಯ್ಕೆ ಇನ್ನಿತರ ಅಂಶಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ತಮ್ಮ ನಿವಾಸದಲ್ಲಿ ಎನ್ಡಿಎ ಮೈತ್ರಿಕೂಟದ ನಾಯಕರ ಜತೆ ಮಹತ್ವದ ಸಮಾಲೋಚನೆ ನಡೆಸಿದರು.
ಮಾಜಿ ಸಚಿವರಾದ ಸಿ. ಪಿ ಯೋಗೇಶ್ವರ್, ಮುನಿರತ್ನ, ಡಿ. ನಾಗರಾಜಯ್ಯ, ಮಾಜಿ ಸಂಸದ ಕುಪೇಂದ್ರರೆಡ್ಡಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಮಾಗಡಿಯ ಮಾಜಿ ಶಾಸಕ ಮಂಜುನಾಥ್, ಗೊಟ್ಟಿಗೆರೆ ಮಂಜುನಾಥ, ಕುಣಿಗಲ್ ಜಗದೀಶ್, ನಾಗರಾಜ್ ಕನಕಪುರ, ಸಿದ್ದಮರೀ ಗೌಡ ಕನಕಪುರ, ಜಯಮುತ್ತು, ಗೌತಮ್, ಪ್ರಸಾದ್ ಗೌಡ, ಕೃಷ್ಣಕುಮಾರ್, ಕೆ. ಪಿ ರಾಜು, ಡಾ. ನಾರಾಯಣಸ್ವಾಮಿ ಸೇರಿದಂತೆ ಉಭಯ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.
ಇನ್ನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಆಗಲಿದ್ದು, ಮೈತ್ರಿಕೂಟದ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಪಣ ತೊಟ್ಟು ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆ ನಮ್ಮದೆಂದು ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದರು. ಪ್ರಧಾನಿಗಳಾದ ನರೇಂದ್ರ ಮೋದಿ ಅವರು, ಮಾಜಿ ಪ್ರಧಾನಿಗಳಾದ ಹೆಚ್. ಡಿ ದೇವೇಗೌಡರು, ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ, ಪ್ರತಿಪಕ್ಷ ನಾಯಕರಾದ ಆರ್. ಅಶೋಕ್ ಅವರ ಜತೆ ಚರ್ಚೆ ನಡೆಸಿದ ನಂತರ ಅಭ್ಯರ್ಥಿ ಆಯ್ಕೆ, ಘೋಷಣೆ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಸಭೆಗೆ ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದರು.