ಬೆಂಗಳೂರು: ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ, ರಾಜ್ಯದಲ್ಲಿ ಜಿಲ್ಲೆ ಜಿಲ್ಲೆಗಳ ನಡುವೆ ಜಲತಂಟೆ ತಂದಿಟ್ಟು ತನ್ನ ಜಲದ್ರೋಹವನ್ನು ಮರೆ ಮಾಚುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಹಾಸನ ಮತ್ತು ತುಮಕೂರು ಜಿಲ್ಲೆಗಳ ನಡುವೆ ಹೇಮಾವತಿ ನೀರಿನ ಜಗಳ ತಂದಿಟ್ಟಿದೆ ಎಂದು ಎಕ್ಸ್ ಜಾಲತಾಣದಲ್ಲಿ ಕಿಡಿಕಾರಿರುವ ಮಾಜಿ ಸಿಎಂ, ಸಿದ್ದರಾಮಯ್ಯ ಸರಕಾರವನ್ನು ತಂಟೆಕೋರ ಸರಕಾರ ಎಂದು ಟೀಕಿಸಿದ್ದಾರೆ. ಕದ್ದುಮುಚ್ಚಿ ನೆರೆರಾಜ್ಯ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರಕಾರ ಆ ಜಲದ್ರೋಹವನ್ನು ಜನರಿಂದ ಮರೆಮಾಚಿಕೊಳ್ಳಲು ಈಗ ನಮ್ಮ ರಾಜ್ಯದಲ್ಲಿ ಜಿಲ್ಲೆ ಜಿಲ್ಲೆಗಳ ನಡುವೆ ನೀರಿನ ಜಗಳ ತಂದಿಡುತ್ತಿದೆ. ಹಾಸನ ಮತ್ತು ತುಮಕೂರಿನಲ್ಲಿ ಅಂತದ್ದೇ 'ಜಲತಂಟೆ' ಪ್ರಯೋಗಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಹಾಸನ ಜಿಲ್ಲೆ ಜನರು ಎಂದೂ ತುಮಕೂರಿಗೆ ನೀರು ಕೊಡುವುದನ್ನು ವಿರೋಧಿಸಿಲ್ಲ, ವಿರೋಧಿಸುವುದೂ ಇಲ್ಲ. ನಮಗೂ ನೀರು ಕೊಡಿ ಎಂದಷ್ಟೇ ಕೇಳುತ್ತಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳ ಜನರು ಎಂದರೆ ಅವಳಿ - ಜವಳಿ ಮಕ್ಕಳಂತೆ. ಅಂಥ ಮಕ್ಕಳ ನಡುವೆಯೇ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಬೆಂಕಿ ಹಾಕುತ್ತಿರುವುದು ನೀಚತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.