ಕರ್ನಾಟಕ

karnataka

ETV Bharat / state

ನನ್ನ ಬಳಿ ನಿಮ್ಮ ಪುರಾಣಗಳಿವೆ, ಸಾವಿರಾರು ಚಾಪ್ಟರುಗಳ ಪ್ಯಾನ್ ಇಂಡಿಯಾ ಸಿನಿಮಾ ಮಾಡಬಹುದು: ಸಿಎಂ ವಿರುದ್ಧ ಹೆಚ್​ಡಿಕೆ ಕಿಡಿ - HDK POST - HDK POST

ಮುಡಾ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಹೆಚ್​ಡಿಕೆ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ದಾಖಲೆಯೊಂದನ್ನು ಟ್ಯಾಗ್ ಮಾಡಿದ್ದಾರೆ.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (IANS)

By ETV Bharat Karnataka Team

Published : Aug 23, 2024, 11:24 AM IST

Updated : Aug 23, 2024, 12:08 PM IST

ಬೆಂಗಳೂರು: "ಸಿದ್ದಕರ್ಮಿ ಸಿದ್ದರಾಮಯ್ಯನವರೇ... ನಿಮ್ಮ ವಿರುದ್ಧ ಬಂದ ಮುಡಾ ಕೊಚ್ಚೆಯ ಗಮನ ಬೇರೆಡೆಗೆ ಸೆಳೆಯುವ ನಿಮ್ಮ ಹುನ್ನಾರ ನನಗೆ ಅರ್ಥವಾಗುತ್ತದೆ. ಹೇಗಾದರೂ ಅಧಿಕಾರದಲ್ಲೇ ಉಳಿದು ಲೂಟಿ ಹೊಡೆಯಬೇಕೆನ್ನುವ ನಿಮ್ಮ ಧನದಾಹದ ಹಪಾಹಪಿಯನ್ನೂ ಅರ್ಥ ಮಾಡಿಕೊಳ್ಳಬಲ್ಲೆ" ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪೋಸ್ಟ್ ಮಾಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, "ಕಳ್ಳನ ಜಾಗದಲ್ಲಿ ನಿಂತು ಊರಿಗೆಲ್ಲ ಗೀತೆ ಬೋಧಿಸುವ ನಿಮ್ಮ ಪ್ರಾರಬ್ಧ ಎಂಥಾ ಕೀಳುಮಟ್ಟಕ್ಕೆ ಇಳಿದಿದೆ ಎನ್ನುವುದನ್ನೂ ಅರ್ಥ ಮಾಡಿಕೊಂಡಿದ್ದೇನೆ. ಎಷ್ಟೇ ಆದರೂ ನೀವು ಸಕಲ ಕಲೆಗಳ ಸಿದ್ದಕರ್ಮಿ, ಇಂಥ ಗಲೀಜು ಕೆಲಸ ನಿಮಗೆ ಬೆಣ್ಣೆಯಿಂದ ಬಂದ ವಿದ್ಯೆ!" ಎಂದು ಬರೆದುಕೊಂಡಿದ್ದಾರೆ.

"ಸಾಯಿ ವೆಂಕಟೇಶ್ವರಕ್ಕೆ 550 ಎಕರೆ ಮಂಜೂರು ಮಾಡಿದ್ದೇನೆ ಎಂದು ಬೊಗಳೆ ಬಿಟ್ಟಿದ್ದೀರಿ. ನನ್ನ ಬರವಣಿಗೆ ಪೋರ್ಜರಿ ಆಗಿದೆ. ಪತ್ರಿಕೆಗಳ ವರದಿಗೆ ನಾನು ಉತ್ತರ ಕೊಡುತ್ತೇನೆ, ಪಲಾಯನ ನನ್ನ ಜಾಯಮಾನವಲ್ಲ. ಆದರೆ, ಆ ವರದಿಯನ್ನೇ ನೆತ್ತಿ ಮೇಲಿಟ್ಟುಕೊಂಡು ಉಪ್ಪಿನಕಾಯಿ ಚಪ್ಪರಿಸುವ ದೈನೇಸಿ ಸ್ಥಿತಿ ನಿಮಗೇಕೆ? 40 ವರ್ಷಗಳ ರಾಜಕೀಯ ಜೀವನದಲ್ಲಿ ನನ್ನ ಮೇಲೆ ಒಂದೇ ಒಂದು ಕಪ್ಪುಚುಕ್ಕೆ ಇಲ್ಲವೆನ್ನುವ ನೀವು, ವೈಟ್ನರ್ ಉಜ್ಜಿ ಕಪ್ಪುಚುಕ್ಕೆ ತೆಗೆಯುವ ವ್ಯರ್ಥ ಪ್ರಯತ್ನ ಮಾಡಿದ್ದೇಕೆ?" ಎಂದು ಪ್ರಶ್ನಿಸಿದ್ದಾರೆ.

"ಮುಡಾದಲ್ಲಿ ನೀವು, ನಿಮ್ಮ ಸಕುಟುಂಬ ಪರಿವಾರ ಸರ್ಕಾರಿ ಭೂಮಿಯನ್ನು ಹೇಗೆಲ್ಲಾ ಮುಕ್ಕಿತು ಎನ್ನುವುದಕ್ಕೆ ದಂಡಿದಂಡಿ ದಾಖಲೆಗಳೇ ಇವೆ. ನಿಮ್ಮ ಪಟಾಲಂ ಹೆಲಿಕಾಪ್ಟರ್​ನಲ್ಲಿ ಕದ್ದು ಸಾಗಿಸಿದ ದಾಖಲೆಗಳು ಸುಳ್ಳಾ? ಕಪ್ಪುಚುಕ್ಕೆಯನ್ನು ನಿಮ್ಮ ವೈಟ್ನರ್ ಅಳಿಸೀತಾ ಸಿದ್ದರಾಮಯ್ಯನವರೇ?. ನನ್ನ ಸಹಿ ಇಲ್ಲ, ಟಿಪ್ಪಣಿಯೂ ಇಲ್ಲ ಅಂತೀರಿ. ಅಪ್ಪಣೆಯನ್ನಷ್ಟೇ ಕೊಟ್ಟಿದ್ದೀರಿ! 14 ಸೈಟಿಗೆ ₹62 ಕೋಟಿ ಪರಿಹಾರ ಕೇಳಲು ಹೇಳಿದ್ದು ಯಾವ ಟಿಪ್ಪಣಿ? ನಿಮ್ಮದು ನಾಲಿಗೆಯೋ.. ಇನ್ನೇನೋ.. ಆಚಾರವಿಲ್ಲದ ನಾಲಿಗೆ ನನ್ನ ತಟ್ಟೆಯತ್ತ ಚಾಚಿದೆ... ಸತ್ತ ಜೀವದ ರುಚಿ ನೆಕ್ಕಲು" ಎಂದು ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

"ಮಿಸ್ಟರ್​​ ಸಿದ್ದರಾಮಯ್ಯ.. ನಾನು ಕಾನೂನು ಪಂಡಿತ, ವಕೀಲ ಎನ್ನುತ್ತೀರಿ. 2011ರಲ್ಲಿ ಸುಪ್ರೀಂ ಕೋರ್ಟ್ SITಗೆ ಕೊಟ್ಟ ಆದೇಶವೇನು ಎಂದು ನಿಮಗೆ ಗೊತ್ತಿಲ್ಲವೇ? ನಾನು ವಕೀಲ.. ನಾನು ವಕೀಲ.. ಎಂದು ಪದೇಪದೆ ಹೇಳಬೇಡಿ ಎಂದು ಹಿಂದೆಯೇ ಸಲಹೆ ಮಾಡಿದ್ದೆ. ಬುದ್ಧಿಗೇಡಿಗಳಿಗೆ ಬುದ್ಧಿವಾದ ರುಚಿಸದು. ರಾಜ್ಯಪಾಲರಿಗೆ SIT ಬರೆದ ಪತ್ರ ಇಟ್ಟುಕೊಂಡು ಹಾರಾಟ ಮಾಡುತ್ತಿದ್ದೀರಿ ನೀವು. ಪತಂಗದ ಹಾರಾಟ ನೋಡಲಿಕ್ಕೆ ಚೆಂದ, ಕೆಳಗಿರುವ ಬೆಂಕಿಜ್ವಾಲೆ ಅದಕ್ಕೆ ಅರಿವಿರುವುದಿಲ್ಲ. ನಿಮ್ಮ ಬಗ್ಗೆ ನನಗೆ ಕನಿಕರವಿದೆ. ನಿಮ್ಮ ಆನಂದ ತಾತ್ಕಾಲಿಕ ಸಿದ್ದರಾಮಯ್ಯನವರೇ.. ಸುತ್ತಲೂ ಪಟಾಲಂ ಕಟ್ಟಿಕೊಂಡು, ಹೈಕಮಾಂಡ್ ಅನ್ನೇ ಕಾಲಕಸ ಮಾಡಿಕೊಂಡು, ನಂಬಿ ಕೈಹಿಡಿದವರ ಬೆನ್ನಿಗೆ ಚೂರಿ ಹಾಕಿ ಕುರ್ಚಿಗಾಗಿ ಪಾಲಿಟಿಕ್ಸ್ ಮಾಡುವ ನಿಮ್ಮ ದಿಕ್ಕೆಟ್ಟ ದುಸ್ಥಿತಿ ನನಗಿಲ್ಲ" ಎಂದು ಹೇಳಿದ್ದಾರೆ.

"ನನ್ನ ರಾಜಕಾರಣ ನಿಮ್ಮಂತೆಯೇ ಹಣಕ್ಕೆ, ಅಧಿಕಾರಕ್ಕೆ ಅಲ್ಲ. ಅಧಿಕಾರ ಇದ್ದರೂ, ಇಲ್ಲದಿದ್ದರೂ ನಾನು ನಾನೇ... 'ಸೋತರೆ ಸೋಲಬೇಕು ಬಾಹುಬಲಿಯಂತೆ..' ಆ ಮಹಾನ್ ವಿರಾಗಿಯೇ ನನ್ನ ಆದರ್ಶ. 20 ತಿಂಗಳ ಅಧಿಕಾರ, 14 ತಿಂಗಳ ಸರ್ಕಾರ ತ್ಯಜಿಸುವಾಗಲೂ ನಾನು ನಿರ್ಭಾವುಕ. ಇದು ನಿಮಗೆ ಸಾಧ್ಯವೇ?. ಪ್ರಧಾನಮಂತ್ರಿಗಳ ರಕ್ಷಣೆ ಪಡೆದುಕೊಳ್ಳುವ, ಅವರ ಗೌರವಕ್ಕೆ ಧಕ್ಕೆ ತರುವ ಕೆಲಸ ನಾನೆಂದೂ ಮಾಡಲಾರೆ. ನನ್ನನ್ನು ನಾನು ರಕ್ಷಣೆ ಮಾಡಿಕೊಳ್ಳುವುದೂ ಗೊತ್ತು. ನಿಮ್ಮ ದುಷ್ಟತನದ ಭಕ್ಷಣೆಯೂ ಗೊತ್ತು. ನನ್ನ ಪುರಾಣ ಕಂತುಗಳಲ್ಲಿ ಬರುತ್ತದೆ ಎನ್ನುವ ಸಿದ್ದರಾಮಯ್ಯನವರೇ.. ನಿಮ್ಮ ಹೆಣೆಬರಹ ನಿರ್ಧರಿಸುವ ನೂರಾರು ಪುರಾಣಗಳು ನನ್ನಲ್ಲಿವೆ. ಸಾವಿರಾರು ಚಾಪ್ಟರುಗಳ ಪ್ಯಾನ್ ಇಂಡಿಯಾ ಸಿನಿಮಾವನ್ನೇ ಮಾಡಬಹುದು. ಬೇಲಿಕೇರಿಯಲ್ಲಿ ಅದಿರು ಕದ್ದ ಅಸಾಮಿಗಳ ಜತೆ ನಿಮ್ಮ 'ಸಿದ್ಧಹಸ್ತ' ಶಾಮೀಲಾಗಿರುವ ಗಣಿಪುರಾಣ ಬಿಚ್ಚಿದರೆ ನಿಮ್ಮ ಮನೆಯ ಮುಂದೆ ಕಾನ್ಸ್​​ಟೇಬಲ್​ಗಳ ಸಾಲುಗಟ್ಟಬೇಕಾಗುತ್ತದೆ. ಹುಷಾರ್..!" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಹೆಚ್ಚಿನ ವಿವರಣೆ ಕೇಳಿ 11 ಮಸೂದೆ ವಾಪಸು ಕಳುಹಿಸಿದ ರಾಜ್ಯಪಾಲರು! - Governor sent back 11 bills

ಮೂಡಾ ನಿವೇಶನ ಹಂಚಿಕೆಯಲ್ಲಿ ನನ್ನ ಹಾಗೂ ನನ್ನ ಕುಟುಂಬದ ಪಾತ್ರವೇ ಇಲ್ಲ ಎಂದು ಬೊಗಳೆ ಬಿಡುವ ನಿಮಗೆ ಕನ್ನಡ ಬರುತ್ತದೆ, ಭಾಷೆಯೂ ಗೊತ್ತಿದೆ ಎಂದು ನಾನಾದರೂ ಪರಿಭಾವಿಸುತ್ತೇನೆ. ನೀವು ಸ್ವಯಂಘೋಷಿತ ವಕೀಲರಲ್ಲವೇ? ದಾಖಲೆಯನ್ನೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು ಓದಿ ಎಂದು ದಾಖಲೆಯನ್ನು ಎಕ್ಸ್ ಖಾತೆಯಲ್ಲಿ ಹೆಚ್​ಡಿಕೆ ಟ್ಯಾಗ್ ಮಾಡಿದ್ದಾರೆ.

Last Updated : Aug 23, 2024, 12:08 PM IST

ABOUT THE AUTHOR

...view details