ಬೆಂಗಳೂರು: ಖಾಸಗಿ ಕಂಪನಿಗೆ ಬೆಂಗಳೂರಿನ ಕಸ ವಿಲೇವಾರಿಯನ್ನು ಗುತ್ತಿಗೆ ನೀಡಿ ಹಣ ಹೊಡೆಯುವ ಹುನ್ನಾರ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೃಹತ್ ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಮಾಡಿ 30 ವರ್ಷದ ಅವಧಿಗೆ 45 ಸಾವಿರ ಕೋಟಿ ರೂ.ಗೆ ಕಸ ವಿಲೇವಾರಿಯನ್ನು ಖಾಸಗಿ ಕಂಪನಿಗೆ ನೀಡಲು ಉದ್ದೇಶಿಸಲಾಗಿದೆ. ಈ ಮೂಲಕ 10 ರಿಂದ 15 ಸಾವಿರ ಕೋಟಿ ರೂ. ಲಪಟಾಯಿಸುವ ಸಂಚು ಅಡಗಿದೆ ಎಂದು ಕಿಡಿಕಾರಿದರು.
ಕಪ್ಪು ಪಟ್ಟಿಯಲ್ಲಿರುವ ಖಾಸಗಿ ಕಂಪನಿಗೆ ಕಸದ ಗುತ್ತಿಗೆ ನೀಡಲು ಪ್ರಯತ್ನ ನಡೆದಿದೆ. ಇನ್ನೂ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಮಾಡಲು ಹೊರಟಿದ್ದಾರೆ. ಅದು ಕೂಡ ಇದೇ ಕಾರಣಕ್ಕೆ ಇರಬೇಕು ಎಂದು ಡಿಕೆಶಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ನಾನು ಹಾಸನ ಜಿಲ್ಲೆಯಲ್ಲಿ ಹುಟ್ಟಿದ್ದರೂ ಮಣ್ಣಿಗೆ ಹೋಗುವುದು ರಾಮನಗರದಲ್ಲೇ ಎಂದು ಹೇಳುವ ಮೂಲಕ ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರುನಾಮಕರಣ ಮಾಡುವುದಕ್ಕೆ ಬಿಡುವುದಿಲ್ಲ ಎಂದರು.
ಇದನ್ನೂ ಓದಿ:ಕೆಇಎ ಪರೀಕ್ಷೆಗೆ ಶೇ.34ರಷ್ಟು ಅಭ್ಯರ್ಥಿಗಳು ಹಾಜರು: ಅಕ್ರಮ ತಡೆಗೆ ವೆಬ್ ಕಾಸ್ಟಿಂಗ್ ಕಣ್ಗಾವಲು - Karnataka Examinations Authority