ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣಾ ಕಣಕ್ಕಿಳಿಯಲಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು, ಇಂದುಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಮುಖಂಡರ ಸಭೆ ನಡೆಸಿ, ಲೋಕಸಭೆ ಚುನಾವಣೆ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.
ಜೆಪಿ ನಗರದ ತಮ್ಮ ನಿವಾಸದಲ್ಲಿ ಇಂದು ಮಧ್ಯಾಹ್ನ ಚನ್ನಪಟ್ಟಣದ ಹಲವಾರು ಮುಖಂಡರ ಜೊತೆ ಸಮಾಲೋಚನೆ ನಡೆಸಿದ ಹೆಚ್ ಡಿಕೆ, ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು. ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಗೆಲ್ಲಲೇಬೇಕು. ಬಿಜೆಪಿ ಅಭ್ಯರ್ಥಿಗಳು ನಿಂತಿರುವ ಕ್ಷೇತ್ರಗಳಲ್ಲಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲಬೇಕು, ಇದು ನಮ್ಮ ಮೈತ್ರಿಕೂಟದ ಗುರಿ ಎಂದು ಹೇಳಿದ್ದಾರೆ.
ಪಕ್ಷದ ಉಳಿವಿಗೆ ನಿರ್ಧಾರ:ಪಕ್ಷದ ಉಳಿವಿಗಾಗಿ ನಾವು ನಿರ್ಧಾರ ತೆಗೆದುಕೊಳ್ಳಲೇಬೇಕು. ನಾನು ಎದುರಿಸಿದ ವೈಯಕ್ತಿಕ ರಾಜಕೀಯ ಸವಾಲುಗಳನ್ನು ನೀವೇ ನೋಡಿದ್ದೀರಿ. ಕಷ್ಟ ಕಾಲದಲ್ಲಿ ನನ್ನ ಕೈ ಹಿಡಿದಿದ್ದೀರಿ. ಚನ್ನಪಟ್ಟಣ ಕಾರ್ಯಕರ್ತರಾದ ನೀವು ಕೇಳಿದಾಗ ಬಂದು ನಾನು ನಿಮ್ಮ ಜತೆ ನಿಂತಿದ್ದೇನೆ. ನಿಮ್ಮ ನನ್ನ ನಡುವಿನ ಸಂಬಂಧ ತಾಯಿ ಮಗನ ಸಂಬಂಧ, ನನ್ನನ್ನು ಮಗನಂತೆ ಕಂಡಿದ್ದೀರಿ. ರಾಜ್ಯದಲ್ಲಿ ಪಕ್ಷ ಉಳಿಸುವ ಸಮಯ ಬಂದಿದೆ. ಅದಕ್ಕೆ ನಿಮ್ಮ ಸಹಕಾರವೂ ಬೇಕು. ಪಕ್ಷಕ್ಕಾಗಿ ಕಠಿಣ ನಿರ್ಧಾರ ಕೈಗೊಳ್ಳಬೇಕು. ಈ ಜೀವ ಇರುವ ತನಕ ನಾನು ಚನ್ನಪಟ್ಟಣ, ರಾಮನಗರ ಬಿಡುವ ಪ್ರಶ್ನೆ ಇಲ್ಲ. ನನ್ನ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ ಎಂದು ಮುಖಂಡರಿಗೆ ಮನವರಿಕೆ ಮಾಡಿದ್ದಾರೆ.
ರಾಜ್ಯದಲ್ಲಿ ನಾನು ದೊಡ್ಡ ಮಟ್ಟದ ಹೋರಾಟ ಮಾಡಬೇಕು. ನೀವು ಒಪ್ಪಿಗೆ ಕೊಡಬೇಕು. ನೀವು ಒಪ್ಪಿಗೆ ಕೊಟ್ಟರೆ ಮಾತ್ರ ನಾನು ಪಕ್ಷ ಬಲಪಡಿಸುವ ಕೆಲಸ ಮಾಡಬಹುದೆಂಬ ಹೆಚ್ಡಿಕೆ ಮಾತಿಗೆ, ಸಭೆಯಲ್ಲಿ ಬಹುತೇಕ ಮುಖಂಡರು ಸಹಮತ ವ್ಯಕ್ತಪಡಿಸಿದ್ದಾರೆ. ಅನೇಕ ಮುಖಂಡರು ಪಕ್ಷ ಉಳಿಸಲು ನಿಮ್ಮ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲ ಮುಖಂಡರು, ನೀವು ಚನ್ನಪಟ್ಟಣದಲ್ಲಿಯೇ ಇರಬೇಕೆಂದು ಪಟ್ಟುಹಿಡಿದಾಗ, ಕಾರ್ಯಕರ್ತರನ್ನು ಸಮಾಧಾನಪಡಿಸಿದ ನಿಖಿಲ್ ಕುಮಾರಸ್ವಾಮಿ ಅವರು, ಪಕ್ಷ ಬಲಪಡಿಸುವ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಸಭೆಯಲ್ಲಿ ಜೆಡಿಎಸ್ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉಪಸ್ಥಿತರಿದ್ದರು.
ಇದನ್ನೂ ಓದಿ:ನಾನು ಸಂಪಾದಿಸಿದ ಆದಾಯದ ಲೆಕ್ಕ ಕೊಡಲು ಸಿದ್ಧ, ಡಾ. ಸುಧಾಕರ್ ಲೆಕ್ಕ ಕೊಡಲು ಸಿದ್ಧರಿದ್ದಾರಾ? : ಪ್ರದೀಪ್ ಈಶ್ವರ್ ಸವಾಲು - MLA PRADEEP ESHWAR