ಬೆಂಗಳೂರು:ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿ ಅಕ್ರಮ ಬಂಧನದಲ್ಲಿಟ್ಟ ಗಂಭೀರ ಆರೋಪ ಪ್ರಕರಣದಲ್ಲಿ ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಈ ಬೆಳವಣಿಗೆಯ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಪ್ರಮುಖ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿ ಚರ್ಚಿಸಿದ್ದಾರೆ.
ನಡೆಯದ ಅಮಿತ್ ಶಾ-ಹೆಚ್‌ಡಿಕೆ ಭೇಟಿ: ಕಲಬುರಗಿ ಜಿಲ್ಲೆಯಲ್ಲಿ ಲೋಕಸಭೆ ಚುನಾವಣಾ ಮತ ಪ್ರಚಾರದಲ್ಲಿದ್ದ ಕುಮಾರಸ್ವಾಮಿ ಶನಿವಾರ ಮಧ್ಯಾಹ್ನದ ನಂತರ ಬೆಂಗಳೂರಿಗೆ ಆಗಮಿಸಿದ್ದರು. ನಂತರ ಸಂಜೆಯವರೆಗೂ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿದ್ದು ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗು ಮತ್ತಿತರ ನಾಯಕರೊಂದಿಗೆ ಮಾತುಕತೆ ಮಾಡಿದ್ದಾರೆ. ವಿಶ್ರಾಂತಿ ಪಡೆಯಲು ಇದೇ ಹೋಟೆಲ್ಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಕುಮಾರಸ್ವಾಮಿ ಯತ್ನಿಸಿದ್ದು, ಶಾ ಭೇಟಿಗೆ ಅವಕಾಶ ನೀಡಲಿಲ್ಲ ಎಂದು ತಿಳಿದುಬಂದಿದೆ.