ಕರ್ನಾಟಕ

karnataka

ETV Bharat / state

ಲೋಕಸಭೆ ಚುನಾವಣೆ: ಮಂಡ್ಯ ಜಿಲ್ಲೆಯ ಮುಖಂಡರೊಂದಿಗೆ ದೇವೇಗೌಡ ಸಭೆ - Mandya district

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಟಿಕೆಟ್​ ಬಗ್ಗೆ ಜೆಡಿಎಸ್​ ಮತ್ತು ಬಿಜೆಪಿಯಲ್ಲಿ ಸಾಕಷ್ಟು ಕುತೂಹಲವಿದೆ. ಇದರ ನಡುವೆಯೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಮಂಗಳವಾರ ಮಹತ್ವದ ಸಭೆ ನಡೆಯಿತು.

ಮಂಡ್ಯ ಜಿಲ್ಲೆಯ ಮುಖಂಡರ ಜೊತೆ ಸಭೆ ನಡೆಸಿದ ಹೆಚ್​ಡಿಡಿ
ಮಂಡ್ಯ ಜಿಲ್ಲೆಯ ಮುಖಂಡರ ಜೊತೆ ಸಭೆ ನಡೆಸಿದ ಹೆಚ್​ಡಿಡಿ

By ETV Bharat Karnataka Team

Published : Feb 13, 2024, 9:43 PM IST

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರವನ್ನು ಈ ಬಾರಿ ಕೈವಶ ಮಾಡಿಕೊಳ್ಳಲು ಜೆಡಿಎಸ್ ಕಸರತ್ತು ನಡಸುತ್ತಿದೆ. ಹಾಲಿ ಸಂಸದೆ ಸುಮಲತಾ ಅಂಬರೀಶ್​ ಅವರಿಗೆ ತುರುಸಿನ ಪೈಪೋಟಿ ಎದುರಾಗುವ ಮುನ್ಸೂಚನೆ ಸಿಗುತ್ತಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ಹಠಕ್ಕೆ ಬಿದ್ದವರಂತೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಮಹತ್ವದ ಸಮಾಲೋಚನೆ ನಡೆಸಿದರು.

ಸಂಸದೆ ಸುಮಲತಾ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಜೆಡಿಎಸ್ ಕ್ಷೇತ್ರ ಬಿಟ್ಟುಕೊಡುವ ಸಾಧ್ಯತೆಯಿಲ್ಲ. ಈ ಬಾರಿಯ ಟಿಕೆಟ್ ಜೆಡಿಎಸ್​​ಗೆ ಎಂದು ಕೇಳಿಬರುತ್ತಿರುವ ವದಂತಿಗೆ ಪುಷ್ಠಿ ನೀಡುವಂತೆ ಗೌಡರ ಸಮ್ಮುಖದಲ್ಲಿ ಈ ಸಭೆ ನಡೆದಿದೆ.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, "ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ವಿಸ್ತೃತ ಸಮಾಲೋಚನೆ ನಡೆಸಲಾಗಿದೆ. ದೇವೇಗೌಡರು ಮಹತ್ವದ ಸಲಹೆ, ಸೂಚನೆಗಳನ್ನು ನೀಡಿದ್ದಾರೆ" ಎಂದರು.

ಮಾಜಿ ಸಚಿವ ಮತ್ತು ಜೆಡಿಎಸ್ ಪಕ್ಷದ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಸಭೆಯಲ್ಲಿ ಪಾಲ್ಗೊಂಡಿದ್ದರು. ಶಾಸಕ ಎಚ್.ಟಿ. ಮಂಜುನಾಥ್, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಡಾ.ಕೆ.ಅನ್ನದಾನಿ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಂಡ್ಯದ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಇದ್ದರು. ಮಂಡ್ಯ ಸೀಟಿನ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ದೇವೇಗೌಡರು ಜಿಲ್ಲೆಯ ಜೆಡಿಎಸ್ ಶಾಸಕರ ಜೊತೆ ಸಭೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ:'ಮುಂದಿನ ಅವಧಿಯಲ್ಲೂ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ': ಮೋದಿ ಭೇಟಿಯಾದ ಸುಮಲತಾ

ಇತ್ತೀಚೆಗೆಷ್ಟೇ ದೆಹಲಿಯಲ್ಲಿ ಸುಮಲತಾ ಅಂಬರೀಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು. ಅಲ್ಲದೇ, ''ಮುಂದಿನ ಅವಧಿಯಲ್ಲಿಯೂ ಸಹ ನಮ್ಮ ರಾಜ್ಯ ಮತ್ತು ರಾಷ್ಟ್ರದ ಸೇವೆಯಲ್ಲಿ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ'' ಎಂದು ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. ಇದಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಜೆಡಿಎಸ್ ವಿರುದ್ಧ ಗೆಲುವು ಸಾಧಿಸಿದ್ದರು. ಕೆಲವು ತಿಂಗಳ ಹಿಂದಷ್ಟೇ ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್​ ಮತ್ತು ಬಿಜೆಪಿ ಒಟ್ಟಿಗೆ ಸ್ಪರ್ಧಿಸಲಿವೆ. ಹೀಗಾಗಿ ಮಂಡ್ಯದ ಟಿಕೆಟ್​ ಬಗ್ಗೆ ಸಹಜವಾಗಿಯೇ ಕುತೂಹಲವಿದೆ.

ABOUT THE AUTHOR

...view details