ಹಾಸನ:"ಜೆಡಿಎಸ್ನಲ್ಲೇ ಬೆಳೆದು ಮತ್ತೆ ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂದು ಕರೆ ಕೊಡುವ ಸಿಎಂ ಸಿದ್ದರಾಮಯ್ಯ ಅವರ ದುರಹಂಕಾರಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಬೇಕು"ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕರೆ ಕೊಟ್ಟಿದ್ದಾರೆ.
ಹಾಸನ ತಾಲೂಕಿನ ಸಾಲಗಾಮೆಯಲ್ಲಿ ಭಾನುವಾರದಂದು ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ದೇವೇಗೌಡರು ಮಾತನಾಡಿದರು. 'ನಮ್ಮ ಪಕ್ಷದಲ್ಲೇ ಬೆಳೆದು ಈಗ ಅಧಿಕಾರದ ಅಹಂ ನಿಂದ ಬಾಯಿಗೆ ಬಂದಂತೆ ಮಾತನಾಡುವ ಜೊತೆಗೆ ಹಾಸನಕ್ಕೆ ಮೂರು ಬಾರಿ ಬಂದು ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಲು ಮುಂದಾಗಿರುವ ಕಾಂಗ್ರೆಸ್ ನಾಯಕರಿಗೆ ಈ ಬಾರಿ ಮುಖಭಂಗ ಮಾಡುವ ಕೆಲಸವನ್ನು ನನ್ನ ಜಿಲ್ಲೆಯ ಜನರು ಮಾಡಬೇಕಿದೆ' ಎಂದರು.
'ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಸಲುವಾಗಿ ಕೇಂದ್ರ ಹಣ ನೀಡುತ್ತಿಲ್ಲ ಎಂದು ಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಧಾವೆ ಹೂಡಿದೆ. ಪ್ರಬಲವಾದ ಪ್ರಧಾನಮಂತ್ರಿ ಇದ್ದರೆ ಇವರು ಕೇಳಿದಂತೆ ಹಣ ನೀಡುವುದಿಲ್ಲ ಎಂಬ ಕಾರಣಕ್ಕೆ ಪ್ರಬಲವಾದ ಪ್ರಧಾನಿ ದೇಶಕ್ಕೆ ಇರಬಾರದು ಎಂದಿದ್ದಾರೆ. ಈ ಬಗ್ಗೆ ಜನ ಯೋಚಿಸುವ ಅಗತ್ಯವಿದೆ'.