ಬೆಂಗಳೂರು: ತನ್ನ ಪತಿಗೆ ಆರೋಗ್ಯ ಸಮಸ್ಯೆಯಿದ್ದು, ವಿವಾಹದ ಬಳಿಕ ಲೈಂಗಿಕ ಸಂಪರ್ಕ ಹೊಂದದೆ ಮಾನಸಿಕ ಆಘಾತ ಉಂಟುಮಾಡಿದ್ದಾನೆ. ಜೊತೆಗೆ, ವರದಕ್ಷಿಣೆ ಕಿರುಕುಳ ನೀಡಿರುವುದಾಗಿ ಆರೋಪಿಸಿ ಪತಿಯ ವಿರುದ್ಧ ಪತ್ನಿ ಸಲ್ಲಿಸಿದ್ದ ದೂರನ್ನು ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ, ಪತಿಯ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದ ಪತ್ನಿಯ ವಿರುದ್ಧ ಪತಿಗೆ ಕಾನೂನು ಕ್ರಮ ಕೈಗೊಳ್ಳಲು ಸ್ವಾತಂತ್ರ್ಯವಿದೆ ಎಂದು ತಿಳಿಸಿದೆ.
ಅಮೆರಿಕದ ಪ್ರಸಿದ್ಧ ಕಂಪನಿಯೊಂದರಲ್ಲಿ ಉತ್ಪಾದನಾ ಘಟಕದ ಎಂಜಿನಿಯರ್ ಆಗಿರುವ 35 ವರ್ಷದ ಪತಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿತು. ಅರ್ಜಿದಾರರ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಇದೇ ವೇಳೆ ರದ್ದುಗೊಳಿಸಿತು.
ಕ್ಷುಲ್ಲಕ ಕಾರಣಗಳಿಗಾಗಿ ಕಾನೂನಿನ ದುರ್ಬಳಕೆ ಮಾಡಿಕೊಂಡು ತನ್ನ ಗಂಡನನ್ನು ಪೊಲೀಸ್ ಠಾಣೆ ಮತ್ತು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿರುವ ಪತ್ನಿಯ ದುರುದ್ದೇಶಪೂರಿತ ನಡೆಯನ್ನು ಆಕ್ಷೇಪಿಸಿ ಅರ್ಜಿದಾರ ಪತಿ ಇಚ್ಛೆಪಟ್ಟಲ್ಲಿ ಪತ್ನಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬಹುದು ಎಂದು ತಿಳಿಸಿದೆ.
ಪ್ರಕರಣದಲ್ಲಿ ಪೊಲೀಸರ ಹೇಳಿಕೆ ಮತ್ತು ದೋಷಾರೋಪಣ ಪಟ್ಟಿಯಲ್ಲಿರುವ ಅಂಶಗಳನ್ನು ಪರಿಶೀಲಿಸಿ ದೂರುದಾರೆ ಪತ್ನಿಯ ದೂರಿನ ಲೋಪಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಭಾರತೀಯ ಸಂಪ್ರದಾಯದಂತೆ ವಿಧಿಬದ್ಧವಾಗಿ ಪಾಣಿಗ್ರಹಣ ಮಾಡಿರುವ ತನ್ನ ಪತಿಯ ವಿರುದ್ಧ ಧರ್ಮಪತ್ನಿ ಸಲ್ಲದ ಆರೋಪ ಹೊರಿಸಿ ಆತನನ್ನು ಕಂಗಾಲಾಗಿಸಿದ್ದಾರೆ. ಕ್ಷುಲ್ಲಕ ಮತ್ತು ಕೌಟುಂಬಿಕ ಕಾರಣಗಳಿಗೆ ರೋಗದ ಲೇಪನ ಮಾಡಿ ವ್ಯಾಜ್ಯ ಹೂಡಿ ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡಿದ್ದಾರೆ. ಹೀಗಾಗಿ, ಪತ್ನಿಯ ವಿರುದ್ಧ ಪತಿ ಐಪಿಸಿ ಕಲಂ 211ರ ಅಡಿಯಲ್ಲಿ ಕ್ರಿಮಿನಲ್ ದೂರು ದಾಖಲಿಸಿ ತಮಗಾಗಿರುವ ಅನ್ಯಾಯದ ವಿರುದ್ಧ ನ್ಯಾಯಪಡೆಯಲು ಅತ್ಯಂತ ಯೋಗ್ಯವಾಗಿದೆ ಎಂದು ಪೀಠ ತಿಳಿಸಿದೆ.
ವರದಕ್ಷಿಣೆ ಬೇಡಿದ್ದಾರೆ ಎಂಬ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಪತ್ನಿಯು ತನ್ನ ಪತಿಯನ್ನು ಎಚ್‌ಐವಿ, ಸಿಫಿಲಿಸ್, ಹೆಪಟೈಟಿಸ್ ಬಿ ಮತ್ತು ಎಸ್‌ಟಿಡಿ ಪರೀಕ್ಷೆಗಳಿಗೆ ಒಳಪಡುವಂತೆ ಒತ್ತಾಯಿಸಿದ್ದಾರೆ. ಆದರೆ, ಈ ಸಂಬಂಧ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾದ ಈ ಎಲ್ಲಾ ಪರೀಕ್ಷೆಗಳಲ್ಲೂ ಪತಿಗೆ ಯಾವುದೇ ರೋಗವಿಲ್ಲ ಎಂಬುದು ದೃಢಪಟ್ಟಿದೆ. ಆಕೆಯ ತಾಯಿ ಮತ್ತು ಸಹೋದರ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ವರದಕ್ಷಿಣೆ ಕಿರುಕುಳದ ಬಗ್ಗೆ ನಿರಾಕರಿಸಿದ್ದಾರೆ. ಹೀಗಾಗಿ, ಈ ಪ್ರಕರಣದಲ್ಲಿನ ಸಂಪೂರ್ಣ ದಾಖಲೆಗಳನ್ನು ಗಮನಿಸಿದಾಗ ಪತಿಯ ದೋಷ, ಕೌಟುಂಬಿಕ ಕ್ರೌರ್ಯದ ಆರೋಪಗಳು ನಿರಾಧಾರ ಎಂಬುದು ಸ್ಪಷ್ಟವಾಗಿದೆ ಎಂದು ನ್ಯಾಯಪೀಠ ವಿವರಿಸಿದೆ.
ಪ್ರಕರಣದ ಹಿನ್ನೆಲೆ:ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯ ನಿವಾಸಿಯಾದ ಪತ್ನಿ 2020ರಲ್ಲಿ ಸ್ವಜಾತಿ ವಧು-ವರರ ಮಾಹಿತಿ ಜಾಲತಾಣದ ಮುಖಾಂತರ ತನ್ನ ಪತಿಯನ್ನು ಕಂಡುಕೊಂಡಿದ್ದರು. ಹಿಂದೂ ಧಾರ್ಮಿಕ ವಿಧಿ-ವಿಧಾನಗಳಿಗೆ ಅನುಗುಣವಾಗಿ 20220ರ ಮೇ 29ರಂದು ಮದುವೆಯಾಗಿದ್ದರು. ಮದುವೆಯ ಮೊದಲ ರಾತ್ರಿ ಇಬ್ಬರೂ ದೈಹಿಕ ಸಂಪರ್ಕದಿಂದ ದೂರವಿದ್ದರು. ಎಚ್1ಬಿ ವಿಸಾ ಹೊಂದಿದ್ದ ಪತಿ ಮದುವೆಯಾದ 40ನೇ ದಿನಕ್ಕೆ ಅಮೆರಿಕಕ್ಕೆ ತೆರಳಿದ್ದರು. ಈ 40 ದಿನಗಳ ಅಂತರದಲ್ಲಿ ಪತಿ ನನ್ನೊಂದಿಗೆ ಏನಾದರೂ ಒಂದು ನೆಪ ಹೇಳಿ ನನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ನಿರಾಕರಿಸಿದ್ದಾರೆ. ನಂತರ ನನ್ನೊಂದಿಗೆ ಎಲ್ಲ ಮಾಧ್ಯಮಗಳಿಂದಲೂ ಸಂಪರ್ಕ ಕಡಿದುಕೊಂಡಿದ್ದಾರೆ. ಅವರು ವಾರ್ಷಿಕ 2 ಕೋಟಿಗಿಂತಲೂ ಹೆಚ್ಚಿನ ಆದಾಯವನ್ನು ಪಡೆಯುತ್ತಿದ್ದು, 3 ಕೋಟಿ ನೀಡಿ ಪ್ರಕರಣ ಇತ್ಯರ್ಥಗೊಳಿಸಬೇಕು ಎಂಬ ಬೇಡಿಕೆ ಇರಿಸಿದ್ದಾಗಿ ಆರೋಪಪಟ್ಟಿಯಲ್ಲಿ ವಿವರಿಸಲಾಗಿತ್ತು.
ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ವಕೀಲ ದೇವರಾಜೇಗೌಡಗೆ ಜಾಮೀನು - Sexual Assault Case