ಬೆಂಗಳೂರು:ಮಕ್ಕಳನ್ನು ನೋಡಿಕೊಳ್ಳುವುದು ಸ್ವಲ್ಪ ಹೊತ್ತಿನ ಕೆಲಸವಷ್ಟೇ, ಪತ್ನಿ ಉದ್ಯೋಗ ಮಾಡಲು ಸಮರ್ಥರಿದ್ದರೂ ಮಾಡುತ್ತಿಲ್ಲ. ಹಾಗಾಗಿ ಆಕೆಗೆ ಜೀವನಾಂಶ ನೀಡಲಾಗದು ಎಂಬ ಗಂಡನ ವಾದವನ್ನು ತಳ್ಳಿಹಾಕಿರುವ ಹೈಕೋರ್ಟ್ ಆಕೆಗೆ ಜೀವನಾಂಶ ನೀಡಲೇಬೇಕು ಎಂದು ತಿಳಿಸಿದೆ.
ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ 18 ಸಾವಿರ ಜೀವನಾಂಶವನ್ನು 36 ಸಾವಿರಕ್ಕೆ ಹೆಚ್ಚಳ ಮಾಡಬೇಕು ಎಂದು ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ, ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣ ಕೆಲಸ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಪತಿ ಕೆನರಾ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿರುವ ಹಿನ್ನೆಲೆಯಲ್ಲಿ ಪತ್ನಿಗೆ ಮಾಸಿಕ 36 ಸಾವಿರ ರೂ. ಜೀವನಾಂಶ ಪಾವತಿಸಲೇಬೇಕು ಎಂದು ಹೇಳಿದೆ.
ಪತಿಯಾದವರು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೆನರಾ ಬ್ಯಾಂಕ್ನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದು ಖಾಸಗಿ ಉದ್ಯೋಗಗಳಂತೆ ಯಾವಗ ಬೇಕಾದರೂ ತೆಗೆದುಹಾಕುವಂತಹ ಉದ್ಯೋಗವಲ್ಲ. ನಿಗದಿತ ವಯಸ್ಸಿನವರೆಗೆ ಭದ್ರತೆ ಇರುವ ಉದ್ಯೋಗವಾಗಿದೆ. ಅವರು ಸದ್ಯ ಸುಮಾರು 90 ಸಾವಿರ ಆದಾಯ ಗಳಿಸುತ್ತಿದ್ದಾರೆ. ಹಾಗಾಗಿ ಅವರು ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಪತ್ನಿಗೆ 36 ಸಾವಿರ ಜೀವನಾಂಶ ನೀಡಬೇಕು ಎಂದು ಪೀಠ ತಿಳಿಸಿದೆ.
ಅಲ್ಲದೇ, ಪತ್ನಿ ಜೀವನಾಂಶ ಕೇಳಿದ್ದಕ್ಕೆ ಪ್ರತಿಯಾಗಿ ಪತಿಯಾದವರು, ಪತ್ನಿ ಉದ್ಯೋಗ ಮಾಡಲು ಎಲ್ಲಾ ಅರ್ಹತೆ ಹೊಂದಿದ್ದಾರೆ. ಅವರು ದುಡಿದು ಹಣಗಳಿಸಿ ಜೀವನ ಮಾಡಬಹುದು. ಅದರ ಬದಲು ಪತಿಯ ಜೀವನಾಂಶದಲ್ಲೇ ಜೀವನ ನಡೆಸಲು ಬಯಸುತ್ತಿದ್ದಾರೆ. ಜತೆಗೆ ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿ ಕೆಲಸವಲ್ಲ ಎಂದು ಹೇಳುತ್ತಿದ್ದಾರೆ. ಆ ವಾದವನ್ನು ಒಪ್ಪಲಾಗದು, ಅಂತಹ ಹೇಳಿಕೆಗಳ ಮೂಲಕ ಕೋರ್ಟ್ ಹಾದಿ ತಪ್ಪಿಸಬಾರದು ಎಂದು ಪೀಠ ತಿಳಿಸಿದೆ.