ಬೆಂಗಳೂರು:ವಿದ್ಯಾರ್ಥಿ ಜೀವನದ ಮೇಲೆ ಬೀರಬಹುದಾದ ಗಂಭೀರ ಹಾಗೂ ಹಾನಿಕಾರಕ ಪರಿಣಾಮ ತಡೆಗಟ್ಟುವ ನಿಟ್ಟಿನಲ್ಲಿ ಮಾನಸಿಕ ಆರೋಗ್ಯ ನೀತಿ ಮತ್ತು ತಾರತಮ್ಯ ವಿರೋಧಿ ನೀತಿ ರೂಪಿಸುವಂತೆ ಖಾಸಗಿ ಹಾಗೂ ಸರ್ಕಾರಿ ವಿವಿಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ತಮ್ಮನ್ನು ಕಾಲೇಜಿನಿಂದ ಅಮಾನತುಗೊಳಿಸಿ ಅಜೀಂ ಪ್ರೇಮ್‌ಜಿ ವಿವಿ ರವಾನಿಸಿರುವ ಇ - ಮೇಲ್ ರದ್ದುಗೊಳಿಸುವಂತೆ ಹಾಗೂ ಇತರ ಎಲ್ಲ ವಿದ್ಯಾರ್ಥಿಗಳಂತೆ ತರಗತಿಯಲ್ಲಿ ಕೂತು ಪಾಠ ಕೇಳುವಂತೆ ಅವಕಾಶ ಒದಗಿಸುವಂತೆ ಕೋರಿ ಪ್ರಥಮ ವರ್ಷದ ಎಂ.ಎ ವ್ಯಾಸಂಗ ಮಾಡುತ್ತಿರುವ ತೃತೀಯ ಲಿಂಗಿ ವಿದ್ಯಾರ್ಥಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ಅವರ ಏಕಸದಸ್ಯ ಪೀಠ ಈ ಸೂಚನೆ ನೀಡಿದೆ. ಅಲ್ಲದೆ, ಈಗಾಗಲೇ ಈ ನೀತಿಯನ್ನು ರೂಪಿಸುವಲ್ಲಿ ಹಾಗೂ ಅನುಷ್ಠಾನಗೊಳಿಸುವಲ್ಲಿ 'ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯವು' ಕೈಗೊಂಡ ಕ್ರಮಗಳನ್ನು ಕುರಿತು ನ್ಯಾಯಪೀಠ ಶ್ಲಾಘನೆ ವ್ಯಕ್ತಪಡಿಸಿದೆ.
ಜತೆಗೆ, ಈ ರೀತಿಯ ಕ್ರಮವನ್ನು ಸರ್ಕಾರಿ ಸೇರಿದಂತೆ ಖಾಸಗಿ ವಿವಿ ಮತ್ತು ಕಾಲೇಜುಗಳು ಅನುರಿಸುವ ಅಗತ್ಯವಿದೆ. ಇದರಿಂದ ವಿದ್ಯಾರ್ಥಿ ಜೀವನದಲ್ಲಿ ಎದುರಿಸುವ ಸಮಸ್ಯೆಗಳನ್ನು ಸೂಕ್ತವಾಗಿ ಬಗೆಹರಿಸಬಹುದು ಎಂದು ಪೀಠ ತಿಳಿಸಿದೆ. ಅಲ್ಲದೇ, ಅನೇಕ ಬಾರಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಗಳು ಮತ್ತು ಸಾಮಾಜಿಕವಾಗಿ ಇತರ ಅಸಹಜ ನಡವಳಿಕೆಗಳೂ ಅವರ ಕುಟುಂಬ, ಶಿಕ್ಷಕ ಮತ್ತು ವಿದ್ಯಾರ್ಥಿ ಸಮುದಾಯವನ್ನು ಒಳಗೊಂಡಂತೆ ಎಲ್ಲರ ಮೇಲೂ ಕೆಟ್ಟ ಪರಿಣಾಮ ಬೀಳುತ್ತದೆ. ಹೀಗಾಗಿ ಅವರ ನಡುವಳಿಕೆ ಕುರಿತು ಕಾಳಜಿ ಮತ್ತು ಅವರೊಂದಿಗೆ ಸೂಕ್ಷ್ಮವಾಗಿ ವ್ಯವಹರಿಸಬೇಕಾದ ಅನಿವಾರ್ಯತೆ ಬಹಳಷ್ಟಿದೆ ಎಂದು ಪೀಠ ಹೇಳಿದೆ.