ಕರ್ನಾಟಕ

karnataka

ETV Bharat / state

ಮುಜರಾಯಿ ಇಲಾಖೆ ಅಧೀನದ ದೇಗುಲಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ ಪ್ರಶ್ನಿಸಿದ್ದ ಅರ್ಜಿ ವಜಾ - High Court

ಪರಂಪರಾಗತವಾಗಿ ದೇವಸ್ಥಾನಗಳನ್ನು ನಿರ್ವಹಣೆ ಮಾಡುತ್ತಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ದೇವಸ್ಥಾನಗಳ ವ್ಯವಸ್ಥಾಪನಾ ಸಂಘ 2016ರ ಜುಲೈ 12ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.

High Court
ಹೈಕೋರ್ಟ್​ (ETV Bharat)

By ETV Bharat Karnataka Team

Published : Sep 20, 2024, 2:22 PM IST

ಬೆಂಗಳೂರು: ಮುಜರಾಯಿ ಇಲಾಖೆ ಅಧೀನದ ಬಿ ಮತ್ತು ಸಿ ವರ್ಗದ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ ಮಾಡುವ ಸಂಬಂಧ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಆಯುಕ್ತರು 2016ರ ಜುಲೈ 12ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ದೇವಸ್ಥಾನಗಳ ವ್ಯವಸ್ಥಾಪನಾ ಸಂಘ 2016ರಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್ ಕಮಾಲ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ದೇವಸ್ಥಾನಗಳಿಗೆ ನಿರ್ವಹಣಾ ಸಮಿತಿಗಳ ರಚನೆಗೆ ಅವಕಾಶ ಮಾಡಿಕೊಡುವ ತಿದ್ದುಪಡಿ ಕಾಯ್ದೆಯನ್ನು ಅನೂರ್ಜಿತಗೊಳಿಸಿ, ಈ ಹಿಂದೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಹೊರಡಿಸಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ತಿದ್ದುಪಡಿ ಕಾಯ್ದೆಯಂತೆ ವ್ಯವಸ್ಥಾಪನಾ ಸಮಿತಿಗಳನ್ನು ರಚಿಸುವ ಅಧಿಕಾರ ಸರ್ಕಾರ ಹೊಂದಿದೆ ಎಂದು ಅಭಿಪ್ರಾಯಪಟ್ಟು, ಅರ್ಜಿ ವಜಾಗೊಳಿಸಿ ಆದೇಶಿಸಿತು.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಕಾಯ್ದೆ 1997ರ ಸೆಕ್ಷನ್ 25ಕ್ಕೆ 2011 ಹಾಗೂ 2012ರಲ್ಲಿ ತಿದ್ದುಪಡಿ ತಂದು ವ್ಯವಸ್ಥಾಪನಾ ಸಮಿತಿಗಳ ನೇಮಕಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದನ್ನು ಕೆಲವು ದೇವಾಲಯಗಳ ಪಾರಂಪರಿಕ ಟ್ರಸ್ಟಿಗಳು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. 2015ರ ನವೆಂಬರ್ 17ರಂದು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ತಿದ್ದುಪಡಿ ಕಾಯ್ದೆಯನ್ನು ಅನೂರ್ಜಿತಗೊಳಿಸಿ ತೀರ್ಪು ನೀಡಿತ್ತು.

ಅದನ್ನು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. 2016ರ ಏಪ್ರಿಲ್ 8ರಂದು ವಿಭಾಗೀಯ ನ್ಯಾಯಪೀಠದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಅದರ ಬಳಿಕ ತಿದ್ದುಪಡಿ ಕಾಯ್ದೆಯಂತೆ ಬಿ ಮತ್ತು ಸಿ ದೇವಸ್ಥಾನಗಳಿಗೆ ನಿರ್ವಹಣಾ ಸಮಿತಿಗಳನ್ನು ರಚಿಸಲು 2016ರ ಜುಲೈ 12ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಪರಂಪರಾಗತವಾಗಿ ದೇವಸ್ಥಾನಗಳನ್ನು ನಿರ್ವಹಣೆ ಮಾಡುತ್ತಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ದೇವಸ್ಥಾನಗಳ ವ್ಯವಸ್ಥಾಪನಾ ಸಂಘ ಈ ಅಧಿಸೂಚನೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.

ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಿಂದೂಯೇತರ ಅಧಿಕಾರಿ ನೇಮಕವೆಂದ ವಿಎಚ್‌ಪಿ: ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ - Ramalinga Reddy

ABOUT THE AUTHOR

...view details