ಬೆಂಗಳೂರು:ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಗೋಮಾಳ ಜಮೀನು ಅತಿಕ್ರಮಿಸಿರುವ ಆರೋಪ ಸಂಬಂಧ ಸಲ್ಲಿಕೆಯಾಗಿರುವ 11 ಪ್ರಮಾಣ ಪತ್ರಗಳನ್ನು ಆಧರಿಸಿ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಜಾರಿ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್.ಆರ್.ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ್ ಮತ್ತು ಕೆ.ರಾಜೇಶ್ ರೈ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಪ್ರಕರಣ ಸಂಬಂಧ ಸರ್ಕಾರದಿಂದ ಸೂಚನೆ ಪಡೆದಿದ್ದು, ನ್ಯಾಯಾಲಯ ಅನುಮತಿಸಿದರೆ ಹೊಸದಾಗಿ ತನಿಖೆ ನಡೆಸಲಾಗುವುದು. ತನಿಖೆಗಾಗಿ ನ್ಯಾಯಾಲಯ ಸೂಚಿಸಿದವರನ್ನೇ ನೇಮಕ ಮಾಡಲಾಗುವುದು. ಇದರ ಮೇಲೆ ನ್ಯಾಯಾಲಯ ನಿಗಾ ಇಡಬಹುದು ಎಂದರು.
ಅನುಷ್ಟಾನಕ್ಕೆ ಮನಸ್ಸು ಮಾಡಿಲ್ಲ:ಇದಕ್ಕೆ ತೀವ್ರ ಆಕ್ಷೇಪಿಸಿದ ಸಮಾಜ ಪರಿವರ್ತನಾ ಸಮುದಾಯದ ಪರ ವಕೀಲರು, ರಾಮನಗರ ಜಿಲ್ಲೆಯ ಹಿಂದಿನ ಮೂವರು ಜಿಲ್ಲಾಧಿಕಾರಿಗಳು ನ್ಯಾಯಾಲಯದ ನಿರ್ದೇಶನದಂತೆ ಪ್ರಾಮಾಣಿಕವಾಗಿ ತನಿಖೆ ನಡೆಸಿದ್ದಾರೆ. ಇದನ್ನು ಅನುಷ್ಠಾನಗೊಳಿಸಲು ಆನಂತರ ಬಂದ ಸರ್ಕಾರಗಳು ಮನಸ್ಸು ಮಾಡಿಲ್ಲ. ಇಲ್ಲಿ ನಿಮ್ಮ ಹಗರಣಗಳನ್ನು ನಾವು ತೆಗೆಯುವುದಿಲ್ಲ, ನಮ್ಮದನ್ನು ನೀವು ತೆಗೆಯಬೇಡಿ ಎಂಬ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಈ ಪ್ರಕರಣ ಹೊಂದಾಣಿಕೆ ರಾಜಕಾರಣಕ್ಕೆ ತಾಜಾ ಉದಾಹರಣೆಯಾಗಿದೆ. ಯಾವ ಕಾರಣಕ್ಕಾಗಿ ಹೊಸದಾಗಿ ತನಿಖೆ ನಡೆಸಬೇಕು? ಒಂದೊಮ್ಮೆ ನ್ಯಾಯಾಲಯಕ್ಕೆ ಆದೇಶ ಅನುಪಾಲನೆಯಾಗಿದೆ ಎನಿಸಿದರೆ ನ್ಯಾಯಾಂಗ ನಿಂದನೆ ಪ್ರಕರಣವನ್ನು ಮುಕ್ತಾಯಗೊಳಿಸಬಹುದು. 15-20 ಬಾರಿ ವಿಚಾರಣೆಯಲ್ಲಿ ಭಾಗಿಯಾಗಿದ್ದೇನೆ. ಯಾವುದೇ ಬೆಳವಣಿಗೆಯಾಗಿಲ್ಲ. ಈ ಪ್ರಕರಣದ ಸಂಬಂಧ ವಿಚಾರಣೆಗೆ ಹಲವು ಪೀಠಗಳು ಬದಲಾಗಿವೆ. ಮೂವರು ಅಡ್ವೊಕೇಟ್ ಜನರಲ್ ಬಂದು ಹೋಗಿದ್ದಾರೆ. ನಮ್ಮ ವೈಯಕ್ತಿಕ ಹಿತಾಸಕ್ತಿ ಈ ಪ್ರಕರಣದಲ್ಲಿ ಏನೂ ಇಲ್ಲ ಎಂದು ತಿಳಿಸಿದರು.