ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಆರೋಪ ಕುರಿತಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಇಂದು ಮುಂದೂಡಿದೆ.
ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿತು.
ಸಂವಿಧಾನದ 135ನೇ ವಿಧಿಯ ಉದ್ದೇಶ, ಕೇಂದ್ರೀಯ ವಿಚಕ್ಷಣಾ ಆಯೋಗ ಕಾಯಿದೆ 2003ರ ನೆಲೆಯಲ್ಲಿ ಕೇಂದ್ರೀಯ ವಿಚಕ್ಷಣಾ ಆಯೋಗದ ಪಾತ್ರ ಸೇರಿದಂತೆ ಹಲವು ವಿಚಾರಗಳ ಕುರಿತು ಪಕ್ಷಕಾರರ ವಕೀಲರಿಂದ ವಾದ ಆಲಿಸಬೇಕಿದೆ ಎಂದು ಆದೇಶದಲ್ಲಿ ಕೋರ್ಟ್ ತಿಳಿಸಿದೆ.
ವಿಚಾರಣೆ ವೇಳೆ ಹಾಜರಿದ್ದ ರಾಜ್ಯ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಪ್ರಕರಣದಲ್ಲಿ ವಿಚಾರಣೆ ನಡೆಸಬೇಕಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಬೇಕೆಂದು ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ಪೀಠ ವಿಚಾರಣೆ ಮುಂದೂಡಿತು. ಅಲ್ಲದೇ, ಬಸನಗೌಡ ಪಾಟೀಲ್ ಯತ್ನಾಳ್ ಪರವಾಗಿ ಹಾಜರಾಗಿದ್ದ ವಕೀಲ ವೆಂಕಟೇಶ್ ದಳವಾಯಿ ಅವರಿಂದ ಪ್ರಕರಣ ಸಂಬಂಧ ದಾಖಲೆಗಳ ಲಿಖಿತ ಸಾರಾಂಶವನ್ನು ಸ್ವೀಕರಿಸಿತು.
ಇದಕ್ಕೂ ಮುನ್ನ, ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮೇ 31ರಂದು ಪ್ರಕರಣದ ಆದೇಶವನ್ನು ಕಾಯ್ದಿರಿಸಿತ್ತು. ಮೇಲಿನ ವಿಚಾರಗಳಿಗೆ ಸ್ಪಷ್ಟನೆ ಕೇಳಬೇಕಾದ ಹಿನ್ನೆಲೆಯಲ್ಲಿ ಮುಂದುವರಿದ ವಿಚಾರಣೆಗೆ ಪ್ರಕರಣವನ್ನು ನಿಗದಿಗೊಳಿಸಲಾಗಿತ್ತು.
ಪ್ರಕರಣದ ಹಿನ್ನೆಲೆ:ಡಿ.ಕೆ.ಶಿವಕುಮಾರ್ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಉದ್ಯಮ ಸೇರಿದಂತೆ ಹಲವು ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದು, ದೆಹಲಿ ಹಾಗೂ ಅವರಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ 2017ರ ಆಗಸ್ಟ್ 2ರಂದು ಆದಾಯ ತೆರಿಗೆಯ ಇಲಾಖೆ ಶೋಧ ನಡೆಸಿತ್ತು. ಈ ವೇಳೆ 8.59 ಕೋಟಿ ರೂಪಾಯಿಗಳ ಹಣ ಪತ್ತೆಯಾಗಿತ್ತು. ಶಿವಕುಮಾರ್‌ಗೆ ಸೇರಿದ ಸ್ಥಳದಲ್ಲಿ 41 ಲಕ್ಷ ರೂಪಾಯಿ ಪತ್ತೆಯಾಗಿತ್ತು. ಇದರ ಬೆನ್ನಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.
ಇದರ ಬಳಿಕ ಜಾರಿ ನಿರ್ದೇಶನಾಲಯ ಕೂಡ ಶಿವಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು. ಇದನ್ನು ಆಧರಿಸಿ 2019ರ ಸೆಪ್ಟೆಂಬರ್ 3ರಂದು ಶಿವಕುಮಾರ್ ಅವರನ್ನು ಬಂಧಿಸಲಾಗಿತ್ತು. ಆ ನಂತರ 2019ರ ಸೆಪ್ಟೆಂಬರ್ 9ರಂದು ಜಾರಿ ನಿರ್ದೇಶನಾಲಯ ಪತ್ರ ಆಧರಿಸಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ನಡೆಸಲು ಸಿಬಿಐಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು.
ಇದನ್ನು ಪ್ರಶ್ನಿಸಿ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ವಜಾಗೊಳಿಸಿತ್ತು. ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣಾ ಹಂತದಲ್ಲಿರುವ ಸಂದರ್ಭದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸಿಬಿಐಗೆ ನೀಡಿದ್ದ ಅನುಮತಿ ರದ್ದುಪಡಿಸಿ ಆದೇಶಿಸಿತ್ತು. ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬಿಜೆಪಿ ಮುಖಂಡ ಯತ್ನಾಳ್ ಹಾಗೂ ಸಿಬಿಐ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಿತ್ತು.
ಇದನ್ನೂ ಓದಿ:ಡಿ.ಕೆ.ಶಿವಕುಮಾರ್ ಪ್ರಕರಣ: ಸಿಬಿಐ, ಯತ್ನಾಳ್ ಅರ್ಜಿ ವಿಸ್ತೃತ ಪೀಠಕ್ಕೆ