ಬೆಂಗಳೂರು: ದೇವಾಯಲಯಗಳನ್ನು ಮಾಹಿತಿ ಹಕ್ಕು ಕಾಯ್ದೆಯಿಂದ ಹೊರಗಿಡಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಬುಧವಾರಕ್ಕೆ ಮುಂದೂಡಿದೆ.
ಅಖಿಲ ಕರ್ನಾಟಕ ಹಿಂದೂ ದೇವಸ್ಥಾನಗಳ ಪುರೋಹಿತರು, ಆಗಮಿಕರು ಹಾಗೂ ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲ ಎನ್. ಆರ್. ನಾಗರಾಜ್, ದೇವಾಲಯಗಳು ಸಾರ್ವಜನಿಕ ಸಂಸ್ಥೆಗಳು ಅಲ್ಲ ಎಂದು ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ಹೈಕೋರ್ಟ್‌ಗಳಲ್ಲದೇ ಕರ್ನಾಟಕದ ಹೈಕೋರ್ಟ್ ಸಹ ಹೇಳಿದೆ. ಮುಖ್ಯವಾಗಿ ದೇವಸ್ಥಾನಗಳು ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ದೇವಸ್ಥಾನಗಳ ಮೇಲೆ ಸರ್ಕಾರದ ಆರ್ಥಿಕ, ಭೌತಿಕ ಅಥವಾ ಆಡಳಿತಾತ್ಮಕ ನಿಯಂತ್ರಣ ಇರುವುದಿಲ್ಲ ಎಂದು ಮಾರ್ತಾಂಡವರ್ಮ ವರ್ಸಸ್ ಕೇರಳ ರಾಜ್ಯದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದು ಆದೇಶದ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಇದನ್ನು ಪರಿಶೀಲಿಸಿದ ನ್ಯಾಯಪೀಠ ಸುಪ್ರೀಂಕೋರ್ಟ್ ಆದೇಶದ ಪ್ರತಿಯನ್ನು ಈಗಷ್ಟೇ ವಕೀಲರು ಹಾಜರುಪಡಿಸಿದ್ದಾರೆ. ಈ ಆದೇಶವನ್ನು ಕೂಲಂಕಷವಾಗಿ ಪರಿಶೀಲಿಸಬೇಕಿದೆ. ಅಲ್ಲದೆ, ಅರ್ಜಿಯಲ್ಲಿ ಹೇಳಿರುವ ದೇವಾಲಯಗಳು ಖಾಸಗಿ ಅಥವಾ ಸರ್ಕಾರಿ ದೇವಾಲಯಗಳು ಎಂಬ ಅಂಶ ತಿಳಿಯಬೇಕಾಗಿದೆ ಎಂದು ತಿಳಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.