ಹಾವೇರಿ:ಹಿಂದೆ ಜಿಲ್ಲೆಯ ವಿದ್ಯಾರ್ಥಿಗಳು ವಿಜ್ಞಾನದ ಪ್ರಾತ್ಯಕ್ಷಿಕೆ, ತಾರಾಮಂಡಲದ ಕೌತುಕಗಳನ್ನು ನೋಡಲು ಧಾರವಾಡ, ದಾವಣಗೆರೆ ನಗರ ಸೇರಿದಂತೆ ವಿವಿಧೆಡೆ ಹೋಗಬೇಕಾಗುತ್ತಿತ್ತು. ಆದರೆ, ಇದೀಗ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರಿಗಿರುವ ಬೆಟ್ಟದ ಮೇಲೆಯೇ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಿಸಲಾಗಿದೆ.
ಫೆ.18ರಂದು ಉದ್ಘಾಟನೆಯಾಗಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಫೆ.20ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ. ವಿದ್ಯಾರ್ಥಿಗಳನ್ನು ವಿಜ್ಞಾನಾಸಕ್ತರನ್ನು ಕೈಬೀಸಿ ಕರೆಯುತ್ತಿದೆ. ಸುಮಾರು ಏಳುಕೋಟಿ ರೂಪಾಯಿ ವೆಚ್ಚದಲ್ಲಿ ಒಂದೂವರೆ ಎಕರೆ ಜಾಗದಲ್ಲಿ ಈ ವಿಜ್ಞಾನ ಕೇಂದ್ರ ನಿರ್ಮಾಣವಾಗಿದೆ. ವಿಜ್ಞಾನ ಕೇಂದ್ರದಲ್ಲಿ ನಾಲ್ಕು ವಿಭಾಗಗಳಿದ್ದು, ಹಲವು ಪ್ರಯೋಗಗಳು, ಕೌತುಕಗಳನ್ನು ಜನರ ಮುಂದೆ ತೆರದಿಡುತ್ತದೆ.
ವಿಜ್ಞಾನ ಕೇಂದ್ರದಲ್ಲೇನಿದೆ?:ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನ ಆಸಕ್ತರಿಗೆ ವೈಜ್ಞಾನಿಕ ಜಗತ್ತಿನ ಆಸಕ್ತಿದಾಯಕ ಭೌತವಿಜ್ಞಾನ, ಖಗೋಳ, ತಾರಾಲಯ, ಬಾಹ್ಯಾಕಾಶ, ಮೋಜಿನ ಗ್ಯಾಲರಿಗಳು, ವಿವಿಧ ಮಾದರಿಗಳು ಕುತೂಹಲ ಮೂಡಿಸುತ್ತಿವೆ. ಒಂದೊಂದು ಮಾದರಿಯು ವಿಭಿನ್ನ ಕೌತುಕ ಕಥೆಗಳನ್ನು ತಿಳಿಸುತ್ತವೆ. ಸುನಾಮಿ, ಪ್ರವಾಹ, ಭೂ ಕುಸಿತ, ಭೂ ಕಂಪನ, ಆಕಾಶ ಕಾಯಗಳು ಒಳಗೊಂಡ ನೂರಾರು ಮಾದರಿಗಳು, ವೈಜ್ಞಾನಿಕ ಪ್ರಶ್ನೋತ್ತರಕ್ಕೆ ಗಣಕೀಕೃತ ಕೌಂಟರ್, ಭೂಮಿ ಮೇಲೆ ನಿಂತಾಗ ನಮ್ಮ ತೂಕದ ಸಾಂದ್ರತೆ, ಜೊತೆಗೆ ಬೇರೆ ಬೇರೆ ಕಾಯಗಳಲ್ಲಿ ನಾವು ನಿಂತಾಗ ಎಷ್ಟು ಗುರುತ್ವಾಕರ್ಷಣೆ ಇರುತ್ತದೆ ಎಂಬ ಮಾಹಿತಿಯು ಗಮನ ಸೆಳೆಯುತ್ತದೆ.
ಕೈಬೀಸಿ ಕರೆಯುವ ವಿಜ್ಞಾನ ಕೇಂದ್ರದ ಹೊರಾವರಣ:ವಿಜ್ಞಾನ ಕೇಂದ್ರದ ಹೊರಾವರಣದಲ್ಲಿ ವಿವಿಧ ವಿಜ್ಞಾನ ಮಾದರಿಗಳು,
ವಿಜ್ಞಾನಿಗಳ ಪ್ರತಿಕೃತಿಗಳು, ಸಭಾಂಗಣ ನಿರ್ಮಾಣ ಮಾಡಲಾಗಿದೆ. ವಿಜ್ಞಾನ ಕೇಂದ್ರಕ್ಕೆ ಪ್ರವೇಶಿಸುತ್ತಿದ್ದಂತೆ ಮೋಜಿನ ವಿಜ್ಞಾನ ಗ್ಯಾಲರಿ ವಿದ್ಯಾರ್ಥಿಗಳನ್ನು ಸೆಳೆಯುತ್ತದೆ. ಈ ಗ್ಯಾಲರಿಯಲ್ಲಿ ಒಟ್ಟು 40 ವಿಜ್ಞಾನ ಮಾದರಿಗಳನ್ನು ಹೊಂದಿದೆ. ಇಲ್ಲಿರುವ ಎಲ್ಲ ಮಾದರಿಗಳು ವಿಜ್ಞಾನ ಹಾಗೂ ಗಣಿತ ವಿಷಯದ ಪರಿಕಲ್ಪನೆ ಆಧಾರದ ಮೇಲೆ ಇವೆ. ಸಂವಾದಾತ್ಮಕ ವಿಜ್ಞಾನದ ಪ್ರದರ್ಶನಗಳನ್ನು ಒದಗಿಸುವುದರೊಂದಿಗೆ ಅಸಂಖ್ಯಾತ ಜನರ ಕುತೂಹಲವನ್ನು ಪ್ರಚೋದಿಸುತ್ತವೆ. ಮತ್ತು ಅವರ ಸೃಜನಶೀಲತೆಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ಫೈಥಾಗೋರಸ್ ಪ್ರಮೇಯ ಸೇರಿದಂತೆ ವಿವಿಧ ಗಣಿತದ ಸೂತ್ರಗಳು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವಲ್ಲಿ ವಿಜ್ಞಾನ ಕೇಂದ್ರ ಸಹಕಾರಿಯಾಗಿದೆ.