ಕರ್ನಾಟಕ

karnataka

By ETV Bharat Karnataka Team

Published : Feb 16, 2024, 5:38 PM IST

ETV Bharat / state

ಸರ್ಕಾರಿ ನೌಕರಿ ಸಿಗದ ನಿರಾಶೆ ಮರೆಸಿದ ಕುಂಬಳಕಾಯಿ ಬೀಜೋತ್ಪಾದನೆ ಕೃಷಿ

ಹಾವೇರಿ ತಾಲೂಕಿನ ಕೋಣನತಂಬಿಗೆ ಗ್ರಾಮದ ಭೀಮಪ್ಪ ಎಂಬ ಯುವಕ ಕುಂಬಳ ಬೀಜೋತ್ಪಾದನೆ ಕೃಷಿ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.

farming pumpkins
ಯುವರೈತ ಭೀಮಪ್ಪ

ಯುವ ರೈತನ ಕಂಬಳಕಾಯಿ ಕೃಷಿ

ಹಾವೇರಿ: ಹಲವು ವರ್ಷಗಳಿಂದ ಅತಿವೃಷ್ಟಿ ಅನಾವೃಷ್ಟಿ, ಪದೇ ಪದೆ ಬರಗಾಲ, ಬೆಳೆದ ಬೆಳೆಗೆ ಯೋಗ್ಯ ದರ ಸಿಗದೇ ಇರುವುದು. ಹೀಗೆ ಅನೇಕ ಸಮಸ್ಯೆಗಳ ನಡುವೆ ಸಿಲುಕಿ ಅನ್ನದಾತ ಕಂಗಾಲಾಗಿದ್ದಾನೆ. ಇದರಿಂದ ಕೃಷಿಯಿಂದ ಬೇಸತ್ತು, ವಿಮುಖರಾಗಿ ಯುವಕರು ನಗರಗಳತ್ತ ಮುಖ ಮಾಡುತ್ತಿದ್ದಾರೆ. ನಗರಗಳಲ್ಲಿ ಎಷ್ಟೇ ಕಷ್ಟ ಬರಲಿ, ಸಿಗುವ ಕಡಿಮೆ ಸಂಬಳದಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಆದರೆ ಇದಕ್ಕೆ ಹೊರತಾಗಿ ಹಾವೇರಿ ತಾಲೂಕಿನ ಕೋಣನತಂಬಿಗೆ ಗ್ರಾಮದ ಭೀಮಪ್ಪ ಎಂಬ ಯುವಕ ಕುಂಬಳಕಾಯಿ ಬೀಜೋತ್ಪಾದನೆ ಕೃಷಿ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಭೀಮಪ್ಪ ಕೃಷಿಯಲ್ಲಿ ಡಿಪ್ಲೋಮಾ ಮಾಡಿ ಸರ್ಕಾರಿ ನೌಕರಿಯ ಕನಸು ಕಂಡಿದ್ದರು. ತೋಟಗಾರಿಕೆ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದರು. ಆದರೆ ತಿಂಗಳಿಗೆ 10 ಸಾವಿರ ರೂಪಾಯಿ ಪಡೆಯುತ್ತಿದ್ದ ಭೀಮಪ್ಪ ಅವರಿಗೆ ಸರ್ಕಾರಿ ನೌಕರಿ ಕನಸು ಈಡೇರುವ ಸಾಧ್ಯತೆ ಕಡಿಮೆಯಾಯಿತು. ಇದರಿಂದ ಗುತ್ತಿಗೆ ಕೆಲಸ ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ತನಗಿರುವ ಜಮೀನಿನಲ್ಲಿ ಕುಂಬಳಕಾಯಿ ಬೆಳೆ ಬೆಳೆದು ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದಾರೆ.

ಕುಂಬಳ ಕೃಷಿ: 25 ಗುಂಟೆ ಜಾಗದಲ್ಲಿ ಎರಡು ಪ್ಲಾಟ್ ಮಾಡಿರುವ ಭೀಮಪ್ಪ, ಕುಂಬಳ ಬಳ್ಳಿ ಸಸಿ ತಂದು ನಾಟಿ ಮಾಡಿದ್ದಾರೆ. ಮಚ್ಲಿಂಗ್ ಮತ್ತು ತುಂತುರು ನೀರಾವರಿ ಅಳವಡಿಸಿ ಅತ್ಯುತ್ತಮ ಕುಂಬಳ ಬಳ್ಳಿ ಬೆಳೆದಿದ್ದಾರೆ. ಕುಂಬಳ ಬಳ್ಳಿ ಬೆಳೆಯುತ್ತಿದ್ದಂತೆ ಅದಕ್ಕೆ ಎರಡು ಕುಡಿ ಇರುವಂತೆ ನೋಡಿಕೊಂಡಿದ್ದಾರೆ. ಪ್ರತಿಯೊಂದು ಕುಡಿಗೂ ಒಂದು ಕುಂಬಳಕಾಯಿ ಬಿಟ್ಟರೆ, ಎರಡು ಕುಂಬಳಕಾಯಿ ಬೆಳೆಯಲು ಅವಕಾಶ ನೀಡಿದ್ದಾರೆ. ಇದರಿಂದ ಬಳ್ಳಿಯಲ್ಲಿ ಎರಡು ಕುಡಿಗಳಲ್ಲಿ ಎರೆಡೆರಡು ಕುಂಬಳಕಾಯಿಗಳು ಬಿಟ್ಟಿದ್ದು ಇನ್ನೂ 15 ದಿನಕ್ಕೆ ಕುಂಬಳಕಾಯಿ ಕಟಾವಿಗೆ ಬರುತ್ತದೆ. ಅದಾದ ನಂತರ ನೆರಳಿನಲ್ಲಿ ಕುಂಬಳಕಾಯಿ ಒಣಗಿಸಿ ಅದರಿಂದ ಬೀಜ ತೆಗೆದು ಮಾರಾಟ ಮಾಡುತ್ತೇನೆ ಎನ್ನುತ್ತಾರೆ ಯುವಕೃಷಿಕ ಭೀಮಪ್ಪ.

ಖರ್ಚು ಕಡಿಮೆ, ಹೆಚ್ಚು ಆದಾಯ:ರಾಣೆಬೆನ್ನೂರಿನ ಕಂಪೆನಿಯೊಂದು ಈಗಾಗಲೇ ಭೀಮಪ್ಪ ಅವರಿಗೆ ಕೆ.ಜಿ ಕುಂಬಳಕಾಯಿ ಬೀಜಕ್ಕೆ ಸುಮಾರು 1,500 ರೂಪಾಯಿ ನೀಡುವುದಾಗಿ ತಿಳಿಸಿದೆ. ನನಗೆ ಒಂದು ಪ್ಲಾಟ್‌ಗೆ ಕಂಪೆನಿ ಒಂದು ಕ್ವಿಂಟಲ್ ಬೀಜ ಬರುವುದಾಗಿ ತಿಳಿಸಿದೆ. ಆದರೆ ಒಂದು ಪ್ಲಾಟ್‌ಗೆ 70 ಕೆ.ಜಿ ಕುಂಬಳಕಾಯಿ ಬೀಜ ಬಂದರೆ ಸಾಕು. ಪ್ಲಾಟ್‌ವೊಂದಕ್ಕೆ 1,05,000 ರೂಪಾಯಿ ಸಿಗುತ್ತದೆ. ಅದರಲ್ಲಿ ಸುಮಾರು 25 ಸಾವಿರ ಖರ್ಚು ತೆಗೆದರೂ, 80 ಸಾವಿರ ರೂಪಾಯಿ ಆದಾಯ ಸಿಗುತ್ತದೆ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಭೀಮಪ್ಪ.

ಕುಂಬಳಕಾಯಿ ಎರಡು ಕುಡಿ ಬಿಡಬೇಕು:ಈ ರೀತಿಯ ಆದಾಯ ಮೆಕ್ಕೆಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದರೂ ಸಿಗುವುದಿಲ್ಲ. ಉಳಿದ ಬೆಳೆಗಳಿಗಿಂತ ಈ ಬೆಳೆಗೆ ರೈತರು ಹೆಚ್ಚು ಜಮೀನು ಹೊಂದಬೇಕಾಗುತ್ತದೆ. ಬೀಜ ಹಾಕಿದ ನಂತರ ಕುಂಬಳಕಾಯಿಗೆ ಎರಡು ಕುಡಿ ಬರುವಂತೆ ನೋಡಿಕೊಳ್ಳಬೇಕು. ಎರಡು ಕುಡಿಗಳಲ್ಲಿ ಹೂ ಬಿಟ್ಟಾಗ ಮುಂಜಾನೆ ಮೂರು ಗಂಟೆಗೆ ಕ್ರಾಸಿಂಗ್ ಮಾಡಬೇಕು. ಈ ರೀತಿ ಕ್ರಾಸಿಂಗ್ ಮಾಡಿದಾಗ ಮಾತ್ರ ಕುಂಬಳಕಾಯಿ ಕಾಯಿ ಹಿಡಿಯುತ್ತೆ. ಒಂದು ಕುಡಿಯಲ್ಲಿ ಒಂದು ಅಥವಾ ಎರಡು ಕುಂಬಳಕಾಯಿ ಬಿಡುತ್ತವೆ. ಅದಕ್ಕಿಂತ ಹೆಚ್ಚು ಬಿಟ್ಟರೆ ಒಳ್ಳೆಯದೇ ಎಂದು ಭೀಮಪ್ಪ ತಿಳಿಸುತ್ತಾರೆ.

ಮೂರು ತಿಂಗಳ ಬೆಳೆ: ಕುಂಬಳಕಾಯಿ ಬೀಜ ಬಿತ್ತನ ಮಾಡಿ, ಕುಂಬಳಕಾಯಿ ಬೆಳೆದು ಅದರ ಬೀಜ ತೆಗೆದು ಮಾರಾಟ ಮಾಡಲು ಮೂರು ತಿಂಗಳು ಬೇಕಾಗುತ್ತದೆ. ಮೂರು ತಿಂಗಳು ಬೆಳೆಯಾಗಿರುವ ಕುಂಬಳಕಾಯಿ ರೈತರನ್ನು ಹೆಚ್ಚು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತದೆ ಎಂದು ಮಾಹಿತಿ ನೀಡುತ್ತಾರೆ. ಉಳಿದ ಬೆಳೆಗಳಾದ ಟೊಮೆಟೋ, ಬದನೆಕಾಯಿ, ಮೆಣಸಿನಕಾಯಿ, ಬೆಂಡೆ ಬೀಜೋತ್ಪಾದನೆಗೆ ಪಾಲಿಹೌಸ್ ನಿರ್ಮಿಸಬೇಕಾಗುತ್ತದೆ. ಆದರೆ ಕುಂಬಳಕಾಯಿ ಬೀಜೋತ್ಪಾದನೆಗೆ ಯಾವುದೇ ಪಾಲಿ ಹೌಸ ಬೇಡ. ಭೀಮಪ್ಪನ ತಂದೆ ಪರಶುರಾಮ ಸಹ ಕೃಷಿಕನಾಗಿದ್ದು ಅವರು ತುಪ್ಪಿರಿಕಾಯಿ ಸೇರಿದಂತೆ ವಿವಿಧ ಬೆಳೆ ಬೀಜೋತ್ಪಾದನೆಯಲ್ಲಿ ಅನುಭವ ಇದೆ. ಈ ಅನುಭವದ ಮೇಲೆ ಭೀಮಪ್ಪ ಇದೀಗ ಕುಂಬಳಕಾಯಿ ಬೆಳೆ ಬೆಳೆದಿದ್ದಾನೆ. ನಗರಕ್ಕೆ ಹೋಗಿ ಇನ್ನೊಬ್ಬರ ಕೈಯಲ್ಲಿ ದುಡಿಯುವುದಕ್ಕಿಂತ ನಮ್ಮ ಸ್ವಂತ ಊರಲ್ಲಿ ಕೃಷಿ ಮಾಡಿ ನಿರುದ್ಯೋಗಿಗಳಿಗೆ ಕೆಲಸ ನೀಡಬಹುದು ಎಂದು ಭೀಮಪ್ಪ ತಂದೆ ಪರಶುರಾಮ್ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಇದನ್ನೂ ಓದಿ:ಬೆಳ್ಳುಳ್ಳಿಗೆ ಬಂಗಾರದ ಬೆಲೆ: ಸಾಲ ಮಾಡಿ ಬೆಳೆ ಬೆಳೆದ ರೈತ ಮೂರೇ ತಿಂಗಳಲ್ಲಿ ಕೋಟ್ಯಧಿಪತಿ

ABOUT THE AUTHOR

...view details