ಹಾಸನ:ಜೆಡಿಎಸ್ ಸಂಸದಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ, ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳದ (ಎಸ್‌ಐಟಿ) ಚುರುಕುಗೊಳಿಸಿದೆ. ಸಂತ್ರಸ್ತ ಮಹಿಳೆಯರು ನೀಡಿದ ದೂರಿನಂತೆ ಹಾಸನದ ಹೊಳೆನರಸೀಪುರದಲ್ಲಿರುವ ರೇವಣ್ಣ ಅವರ ಮನೆಯಲ್ಲಿ ಅಧಿಕಾರಿಗಳು ಇಬ್ಬರು ಸಂತ್ರಸ್ತೆಯರ ಸಮ್ಮುಖದಲ್ಲೇ ಸ್ಥಳ ಮಹಜರು ಮಾಡಿದ್ದಾರೆ.
ಹೊಳೆನರಸೀಪುರದಲ್ಲಿ ಇಬ್ಬರು ಸಂತ್ರಸ್ತೆಯರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯದ ಸ್ಥಳ ಮಹಜರು ನಡೆಸಿದ ಬಳಿಕ ಮತ್ತೊಬ್ಬ ಸಂತ್ರಸ್ತೆಯನ್ನು ಅಧಿಕಾರಿಗಳು ಹಾಸನದ ರೇಸ್ ಕೋರ್ಸ್ ರಸ್ತೆಯ ಎಸ್ಪಿ ಕಚೇರಿಯ ಪಕ್ಕದಲ್ಲಿರುವ ಸಂಸದರ ನಿವಾಸಕ್ಕೆ ಕರೆತಂದು ಮಹಜರು ಕಾರ್ಯ ಕೈಗೊಂಡರು. ಡಿವೈಎಸ್ಪಿ ಸತ್ಯ ನಾರಾಯಣ್ ಸಿಂಗ್, ಸುಮಾರಾಣಿ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಅಧಿಕಾರಿಗಳ ತಂಡ ಆಗಮಿಸಿತ್ತು. ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಸ್ವರ್ಣ, ಪಿಎಸ್ಐ ಕುಮುದ ಮಹಜರು ಕಾರ್ಯ ಕೈಗೊಂಡರು. ಸಂತ್ರಸ್ತೆಯನ್ನು ಸಂಸದರ ನಿವಾಸದ ಮೊದಲ ಮಹಡಿಗೆ ಕರೆದುಕೊಂಡು ಹೋಗಿ, ದೌರ್ಜನ್ಯ ನಡೆದಿದೆ ಎನ್ನಲಾದ ರೂಮಿನಲ್ಲಿ 5 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು.