ಬೆಂಗಳೂರು:ಹಾಸನ ಲೈಂಗಿಕ ದೌರ್ಜನ್ಯದ ಮುಂದುವರಿದ ಭಾಗವಾಗಿ ಸಂತ್ರಸ್ತೆಯ ಅಪಹರಣ ಆರೋಪ ಸಂಬಂಧ ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಅವರನ್ನು ಶನಿವಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದ್ದು, ಪುತ್ರ ಪ್ರಜ್ವಲ್ ರೇವಣ್ಣ ಇಂದುಭಾರತಕ್ಕೆ ವಾಪಸಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು, ಮಂಗಳೂರು, ಗೋವಾ ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಲ್ಲಿ ವಿಶೇಷ ಕಣ್ಗಾವಲಿರಿಸಲಾಗಿದೆ. ಪ್ರಜ್ವಲ್ ಪತ್ತೆಗಾಗಿ ಈಗಾಗಲೇ ಲುಕ್‌ಔಟ್ ನೋಟಿಸ್ ಕೂಡಾ ಜಾರಿಯಾಗಿರುವುದರಿಂದ ಅವರು ಭಾರತಕ್ಕೆ ಬಂದಿಳಿಯುತ್ತಿದ್ದಂತೆ ವಶಕ್ಕೆ ಪಡೆದುಕೊಳ್ಳಲು ಎಸ್ಐಟಿ ಸಿದ್ಧತೆ ಮಾಡಿಕೊಂಡಿದೆ.
ಪ್ರಕರಣ ಸಂಬಂಧ ಮತ್ತೆ ಮೂವರು ಸಂತ್ರಸ್ತೆಯರು ಎಸ್ಐಟಿ ತನಿಖಾಧಿಕಾರಿಗಳ ಸಂಪರ್ಕಕ್ಕೆ ಸಿಕ್ಕಿದ್ದು, ಈ ಬಗ್ಗೆ ವಿಚಾರಣೆ ಆರಂಭವಾಗಿದೆ. ವಿಚಾರಣೆಯ ಬಳಿಕ ಪ್ರತ್ಯೇಕ ಕೇಸುಗಳನ್ನು ದಾಖಲಿಸಿಕೊಳ್ಳುವ ಸಾಧ್ಯತೆ ಇದೆ.
ಹಾಸನ ವಿಡಿಯೋ ಪ್ರಕರಣ ಸಂಬಂಧ ಸಾಕಷ್ಟು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣರಿಗೆ ಎಸ್ಐಟಿ ನೋಟಿಸ್ ನೀಡಿತ್ತು. ವಿದೇಶದಲ್ಲಿರುವುದರಿಂದ ವಿಚಾರಣೆಗೆ ಹಾಜರಾಗಲು ಅವರು 7 ದಿನಗಳ ಕಾಲಾವಕಾಶ ಕೋರಿದ್ದರು. ಆದರೆ ಎಸ್ಐಟಿ ಈ ಮನವಿಯನ್ನು ತಿರಸ್ಕರಿಸಿತ್ತು. ಜೊತೆಗೆ ಲುಕ್‌ಔಟ್ ನೋಟಿಸ್ ಜಾರಿ ಮಾಡಿತ್ತು.