ಕರ್ನಾಟಕ

karnataka

ETV Bharat / state

ಗರ್ಭ ಗುಡಿ ಬಾಗಿಲು ಓಪನ್​ ; 9 ದಿನ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ - HASANAMBA TEMPLE

ಹಾಸನದ ಅಧಿದೇವತೆ ಹಾಸನಾಂಬೆಯ ಗರ್ಭಗುಡಿಯ ಬಾಗಿಲನ್ನು ಇಂದು ತೆರೆಯಲಾಗಿದೆ. ನವೆಂಬರ್ 2ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿದೆ.

hasanamba
ಹಾಸನಾಂಬೆ (ETV Bharat)

By ETV Bharat Karnataka Team

Published : Oct 24, 2024, 6:06 PM IST

ಹಾಸನ :ವರ್ಷಕ್ಕೊಮ್ಮೆ ದರ್ಶನ ನೀಡುವಂತಹ ಹಾಸನದ ಅಧಿದೇವತೆ ಹಾಸನಾಂಬೆಯ ಬಾಗಿಲನ್ನು ಇಂದು ತೆರೆಯಲಾಗಿದೆ. ಜಿಲ್ಲಾಡಳಿತದ ಸಮ್ಮುಖದಲ್ಲಿ ತುಮಕೂರು ಜಿಲ್ಲೆಯ ಸಿದ್ಧಗಂಗಾ ಮಠದ ಶಿವಲಿಂಗ ಮಹಾಸ್ವಾಮಿಗಳು ಹಾಗೂ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮಿಗಳ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎನ್ ರಾಜಣ್ಣ ನೇತೃತ್ವದಲ್ಲಿ ಬಾಗಿಲನ್ನ ವಿದ್ಯುಕ್ತವಾಗಿ ತೆರೆಯಲಾಯಿತು.

ಅಶ್ವಜಮಾಸದ ನಂತರ ಬರುವ ಮೊದಲ ಗುರುವಾರದಂದು ಬಾಗಿಲನ್ನು ತೆರೆಯಲಾಗುತ್ತದೆ. ಬಾಗಿಲನ್ನು ತೆರೆಯುವ ಮುನ್ನ ಮೈಸೂರಿನ ಅರಸು ಮನೆತನದ ವಂಶಸ್ಥ ನಂಜರಾಜ ಅರಸ್, ಗರ್ಭಗುಡಿಯ ಭಾಗದಲ್ಲಿ ಬಾಳೆ ಕಂದನ್ನು ಕಡಿಯುವ ಮೂಲಕ ದೇವಿ ದರ್ಶನಕ್ಕೆ ಅನುವು ಮಾಡಿಕೊಟ್ಟರು.

ಹಾಸನಾಂಬೆ ದೇಗುಲದ ಬಾಗಿಲು ಓಪನ್​ ಆಗಿದೆ (ETV Bharat)

ಹಾಸನಾಂಬ ದೇಗುಲ ಇಂದಿನಿಂದ ನವೆಂಬರ್ 3ರ ವರೆಗೆ ತೆರೆದಿರಲಿದ್ದು, ಜಾತ್ರಾ ಮಹೋತ್ಸವ ನಡೆಯಲಿದೆ. ನಾಳೆಯಿಂದ ನವೆಂಬರ್​ 2ರ ವರೆಗೆ ಸಾರ್ವಜನಿಕ ಭಕ್ತರ ದರ್ಶನಕ್ಕೆ ಅವಕಾಶ ಇದೆ. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಸ್ವಾಮೀಜಿ, ಸಚಿವ ಕೆ ಎನ್​ ರಾಜಣ್ಣ, ಶಾಸಕ ಸ್ವರೂಪ್‌ ಪ್ರಕಾಶ್, ಸಂಸದ ಶ್ರೇಯಸ್‌ ಪಟೇಲ್, ಜಿಲ್ಲಾಧಿಕಾರಿ ಸತ್ಯಭಾಮ, ಪೊಲೀಸ್​ ವರಿಷ್ಠಾಧಿಕಾರಿ ಮಹಮದ್ ಸುಜೀತ್ ದೇವಿಯ ಪವಾಡಕ್ಕೆ ಸಾಕ್ಷಿಯಾದರು.

ಹಾಸನಾಂಬ ದೇವಾಲಯದಲ್ಲಿ ಗರ್ಭಗುಡಿ ಬಾಗಿಲು ವರ್ಷದಲ್ಲಿ ಒಂದು ಬಾರಿ ಮಾತ್ರ ತೆರೆಯುವುದು ವಿಶಿಷ್ಟ ಸಂಪ್ರದಾಯವಾಗಿದೆ. ಪ್ರತೀ ವರ್ಷ ಅಶ್ವಯುಜ ಮಾಸದ ಅಷ್ಟಮಿಯ ದಿನ ಬಾಗಿಲು ತೆರೆಯಲಾಗುತ್ತದೆ. ಸಾಮಾನ್ಯವಾಗಿ ಇದು ದೀಪಾವಳಿ ಹಬ್ಬದ ಸಮಯದಲ್ಲಿ ಬರುತ್ತದೆ.

ಹಾಸನಾಂಬೆ ದೇಗುಲ (ETV Bharat)

ಈ ಸಂದರ್ಭದಲ್ಲಿ ಪ್ರತಿ ವರ್ಷ ಒಂದು ವಾರ ಸಾರ್ವಜನಿಕರ ದರ್ಶನಕ್ಕೆ ಬಾಗಿಲು ತೆರೆಯಲಾಗುತ್ತದೆ. ಈ ಸಮಯದಲ್ಲಿ ದೇವಿಯ ಆಶೀರ್ವಾದವನ್ನು ಪಡೆಯುವುದರಿಂದ ಬಾಳಿನಲ್ಲಿ ಸಮೃದ್ಧಿ ಮತ್ತು ಸಂತೋಷ ಉಂಟಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ವರ್ಷದ ಉಳಿದ ಸಮಯದಲ್ಲಿ ದೇವಾಲಯವು ಮುಚ್ಚಿರುತ್ತದೆ. ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ಬೆಳಗಿದ ದೀಪ, ಹೂವುಗಳನ್ನು ಒಳಗೆ ಇಡಲಾಗುತ್ತದೆ. ಅಚ್ಚರಿ ಎಂಬಂತೆ, ಅವುಗಳು ಮುಂದಿನ ವರ್ಷ ದೇವಾಲಯವನ್ನು ಮತ್ತೆ ತೆರೆಯುವಾಗ ತಾಜಾ ಆಗಿರುತ್ತವೆ ಮತ್ತು ದೀಪವು ಆಗಲೂ ಉರಿಯುತ್ತಿರುತ್ತದೆ. ಇದು ಭಕ್ತರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ.

ಹಾಸನಾಂಬ ದರ್ಶನ ಸಮಯ : ಸಾಮಾನ್ಯವಾಗಿ ಹಾಸನಾಂಬ ದೇಗುಲದಲ್ಲಿ ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಈ ಬಾರಿ ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮಾತ್ರವಲ್ಲದೆ, ನೈವೇದ್ಯದ ಸಮಯ ಹೊರತುಪಡಿಸಿ ಉಳಿದಂತೆ ಎಲ್ಲಾ ಅವಧಿಯಲ್ಲೂ ದರ್ಶನಕ್ಕೆ ಅವಕಾಶವಿದೆ.

ಹಾಸನಾಂಬೆ ದೇಗುಲ (ETV Bharat)

ಒಟ್ಟಿನಲ್ಲಿ ಹಾಸನಾಂಬ ದೇವಿ ದರ್ಶನ ಇಂದು ಕೆಲವರಿಗೆ ಮಾತ್ರ ಲಭಿಸಿದ್ದು, ಶುಕ್ರವಾರದಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ. 9 ದಿನಗಳ ಕಾಲ ದೇವಿ ದರ್ಶನವನ್ನು ಪಡೆಯಲು ಅವರ ಜಿಲ್ಲೆಯಿಂದಷ್ಟೇ ಅಲ್ಲದೇ ಹೊರರಾಜ್ಯ, ದೇಶಗಳಿಂದಲೂ ಇತ್ತೀಚಿನ ದಿನಗಳಲ್ಲಿ ಬರುತ್ತಿರುವುದು ವಿಶೇಷತೆಯಾಗಿದೆ.

ಇದನ್ನೂ ಓದಿ :ಹಾಸನಾಂಬೆ ಮಹೋತ್ಸವದಲ್ಲಿ ಇಸ್ಕಾನ್ ಲಡ್ಡು ವಿತರಿಸಲು ನಿರ್ಧಾರ: ಜಿಲ್ಲಾಧಿಕಾರಿ - Hasanamba Mahotsava

ABOUT THE AUTHOR

...view details