ದಾವಣಗೆರೆ: ಹರಿಹರದ ವೀಳ್ಯದೆಲೆ ಹಬ್ಬ-ಹರಿದಿನ, ಗೃಹ ಪ್ರವೇಶ, ಮದುವೆ ಸಮಾರಂಭಕ್ಕೆ ಅತೀ ಹೆಚ್ಚು ಬಳಕೆಯಾಗುತ್ತದೆ. ಈ ವೀಳ್ಯದೆಲೆಗೆ ದಾವಣಗೆರೆಯಲ್ಲಿ ಮಾತ್ರವಲ್ಲ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೇಡಿಕೆ ಇದೆ. ನೂರಾರು ಎಕರೆಯಲ್ಲಿ ಬೆಳೆಯುವ 'ಪಾನ್'ಗೆ ಬಡ್ಡೆ ರೋಗ ಬಂದಿದ್ದರಿಂದ ರೈತರು ಕೊಂಚ ಆತಂಕದಲ್ಲಿದ್ದಾರೆ. ಅದನ್ನು ಹೊರತುಪಡಿಸಿದರೆ ಬೆಲೆ ಮಾತ್ರ ಬಂಪರ್.
ಹರಿಹರ ತಾಲೂಕಿನ ರೈತರ ಪ್ರಮುಖ ಬೆಳೆ ವೀಳ್ಯದೆಲೆ. ಎಲೆ ಬಳ್ಳಿ ಕಾಯಕವನ್ನು ಇಲ್ಲಿನ ರೈತರು ಉಸಿರಾಗಿಸಿಕೊಂಡಿದ್ದಾರೆ. ನೂರಾರು ಎಕರೆಯಲ್ಲಿ ಎಲೆಬಳ್ಳಿ ಕೃಷಿ ವಿಸ್ತರಿಸುತ್ತಿದೆ. ಈ ಬೆಳೆಗೆ ನೂರಾರು ವರ್ಷಗಳ ಇತಿಹಾಸವೂ ಇದೆ.
ವೀಳ್ಯದೆಲೆ ತೋಟದಲ್ಲಿ ರೈತ (ETV Bharat) ಬೆಳ್ಳೂಡಿ, ಹನಗವಾಡಿ, ಶಿವನಹಳ್ಳಿ, ಭಾನುಹಳ್ಳಿ, ನಾಗೇನಹಳ್ಳಿ, ರಾಮತೀರ್ಥ.. ಹೀಗೆ ಸಾಕಷ್ಟು ಹಳ್ಳಿಯ ರೈತರು ನೂರಾರು ವರ್ಷಗಳಿಂದಲೂ ವೀಳ್ಯದೆಲೆ ಬೆಳೆಯುತ್ತಿದ್ದಾರೆ. ವೀಳ್ಯದೆಲೆಯ ಒಂದು ಫಸಲಿಗಾಗಿ ಆರು ತಿಂಗಳಿಂದ ಒಂದು ವರ್ಷ ಕಾಯಬೇಕು. ಉತ್ತಮ ಗೊಬ್ಬರ, ಔಷಧ ಹಾಕಿದ್ರೆ ಒಂದು ವರ್ಷಕ್ಕೆ ಎರಡು ಬಾರಿ ಫಸಲು ನೀಡುತ್ತದೆ ಎಂದು ರೈತರು ಹೇಳುತ್ತಾರೆ.
ರೈತ ವೀರಭದ್ರಪ್ಪ ಈಟಿವಿ ಭಾರತದೊಂದಿಗೆ ಮಾತನಾಡಿ, "ವೀಳ್ಯದೆಲೆ ಪ್ರತಿಯೊಂದು ಕಾರ್ಯಕ್ರಮಕ್ಕೂ ಬೇಕು. ಆರು ತಿಂಗಳು ಕಷ್ಟಪಟ್ಟರೆ ಒಂದು ವರ್ಷಕ್ಕೆ ಫಲ ನೀಡುತ್ತದೆ. ತಿಂಗಳಿಗೊಮ್ಮೆ ಕಟಾವು ಮಾಡಬೇಕು. ಗೊಬ್ಬರ, ಔಷಧವನ್ನು ವರ್ಷಕ್ಕೆರಡು ಬಾರಿ ಹಾಕಿದ್ರೆ ಒಳ್ಳೆ ಇಳುವರಿ ಬರುತ್ತದೆ. ಹನಗವಾಡಿ, ಬೆಳ್ಳೂಡಿ, ಶಿವನಹಳ್ಳಿ, ಭಾನುಹಳ್ಳಿ, ನಾಗೇನಹಳ್ಳಿ, ರಾಮತೀರ್ಥ ಗ್ರಾಮಗಳಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಧಾರವಾಡ, ಹುಬ್ಬಳ್ಳಿ, ರಾಣೆಬೆನ್ನೂರು, ಹಾವೇರಿ, ಕೋಲಾರ, ಚಿಂತಾಮಣಿಯಲ್ಲಿ ಹರಿಹರದ ಪಾನ್ಗೆ ಬೇಡಿಕೆ ಇದೆ. ರಾಣೆಬೆನ್ನೂರಿನಿಂದ ಹಡಗಿನ ಮೂಲಕ ಒಂದು ವರ್ಷಕ್ಕೊಮ್ಮೆ ವೀಳ್ಯದೆಲೆ ಪಾಕಿಸ್ತಾನದ ಕರಾಚಿಗೂ ಹೋಗುತ್ತದೆ. ಅವರು ಒಣ ಪುಡಿ ಮಾಡಿ ಬಳಸುತ್ತಾರೆ" ಎಂದು ತಿಳಿಸಿದರು.
ವೀಳ್ಯದೆಲೆ ತೋಟದಲ್ಲಿ ರೈತ (ETV Bharat) ಹರಿಹರ ತಾಲೂಕಿಗೆ ಬೆಳೆ ಬಂದಿದ್ದೇಗೆ?:ರೈತ ರಾಜಪ್ಪ ಮಾತನಾಡಿ, "ಹರಿಹರದ ಎಲೆಗೆ 100-150 ವರ್ಷಗಳ ಕಾಲದಿಂದ ಇತಿಹಾಸವಿದೆ. ಕಾಡಿನಲ್ಲಿದ್ದ ಎಲೆ ಬಳ್ಳಿಯನ್ನು ಹಿರಿಯರು ತಂದು ಹರಿಹರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆದಿದ್ದರು. ಕಟ್ಟಿಗೆ ಸಿಗಿಸಿ ಹಚ್ಚಿದ್ದೇ ತಡ ವೀಳ್ಯದೆಲೆ ಹೆಚ್ಚು ಫಸಲು ಬಂದಿತ್ತು. ಹಂತಹಂತವಾಗಿ ನೂರಾರು ಎಕರೆಗೆ ಹರಡಿತು. ಬಳಿಕ ಬೇರೆ ಗ್ರಾಮಗಳಿಗೆ ಬೆಳೆ ಚಾಚಿಕೊಂಡಿತು" ಎಂದು ಮಾಹಿತಿ ನೀಡಿದರು.
ಬೆಲೆ ಹೇಗಿದೆ?: "ಒಂದು ಪೆಂಡಿ ಎಲೆ ಕೊಯ್ದು ಮಾರುಕಟ್ಟೆಗೆ ಕಳುಹಿಸಲು 1,200 ರೂಪಾಯಿ ಖರ್ಚಾಗುತ್ತದೆ. ಒಂದು ಆಳಿಗೆ 500 ರೂ ಕೂಲಿ, ಊಟ ನೀಡಬೇಕು. ಸದ್ಯ ಒಂದು ಹಂಡಿ ಎಲೆ ಪೆಂಡಿ 10-12 ಸಾವಿರ ತನಕ ಬೆಲೆ ಇದೆ. ಒಂದು ಹಂಡಿ ಪೆಂಡಿಯಲ್ಲಿ 12 ಸಾವಿರ ಚಿಕ್ಕ ಎಲೆ, 6 ಸಾವಿರ ಹಿರಿಯ ಎಲೆ ಇರುತ್ತದೆ. ಒಂದು ಹಂಡಿ ಪೆಂಡಿಯಲ್ಲಿ 120 ಎಲೆಯ ಕಟ್ಟು ಇರುತ್ತವೆ" ಎಂದು ಅವರು ತಿಳಿಸಿದ್ದಾರೆ.
"ಆರಂಭದಲ್ಲಿ ಎಲೆ ಕೊಯ್ದು ಹೊರಗೆ ತಂದು ಪೆಂಡಿ ತಿರುವಿ, ನೀರು ಮಾಡಿಕೊಂಡು ಹರಿಹರ ಮಾರುಕಟ್ಟೆಗೆ ರವಾನಿಸುತ್ತೇವೆ. ಅಲ್ಲಿಂದ ಬೆಂಗಳೂರು, ಚಿಂತಾಮಣಿ, ಚಿತ್ರದುರ್ಗ, ಧಾರವಾಡ, ಹುಬ್ಬಳ್ಳಿ, ರಾಣೆಬೆನ್ನೂರು ಮಾರುಕಟ್ಟೆಗಳಿಗೆ ಹರಿಹರದ ಎಲೆ ಹೋಗುತ್ತದೆ. ರಾಣೆಬೆನ್ನೂರು ಮಾರುಕಟ್ಟೆಯ ಮೂಲಕ ಕರಾಚಿಗೆ ಎಲೆ ರಫ್ತಾಗುತ್ತದೆ. ಅಲ್ಲಿಂದ ಯಾವ ಕಡೆ ಹೋಗುತ್ತೆ ಎಂಬ ಮಾಹಿತಿ ಇಲ್ಲ'' ಎಂದರು.
ರಾಜ್ಯದ ಪ್ರಸಿದ್ಧ ಹರಿಹರ ವೀಳ್ಯೆದೆಲೆಯ ಇತಿಹಾಸ (ETV Bharat) ಬಡ್ಡೆ ರೋಗಕ್ಕೆ ನಲುಗಿದ ವೀಳ್ಯದೆಲೆ ಬೆಳೆಗಾರರು:"ಆದರೆ, ಎಲೆ ಬಳ್ಳಿಯ ಬಡ್ಡೆ ರೋಗಕ್ಕೆ ರೋಸಿ ಹೋಗಿದ್ದೇವೆ. ಗುಣಿಯಿಂದಲೇ ಬರುವ ರೋಗಕ್ಕೆ ಇಡೀ ಬಳ್ಳಿ ಕೊಳೆತು ಹೋಗುತ್ತದೆ. ಎಲೆಗಳೆಲ್ಲಾ ಉದುರುತ್ತವೆ. ಬಡ್ಡೆ ರೋಗಕ್ಕೆ ರೈತರು ಸೋತು ಹೋಗಿದ್ದಾರೆ. ಇದಕ್ಕೆ ಪರಿಹಾರ ಕಲ್ಪಿಸಿಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ ಇಲ್ಲಿತನಕ ಈ ರೋಗಕ್ಕೆ ಯಾವುದೇ ಪರಿಹಾರ ಸಿಕ್ಕಿಲ್ಲ" ರೈತರು ಹೇಳಿದ್ದಾರೆ.
ಇದನ್ನೂ ಓದಿ:ಅಕಾಲಿಕ ಮಳೆಯಿಂದ ಕೊಳೆತ ವೀಳ್ಯದೆಲೆ ಬಳ್ಳಿ.. ಆತಂಕದಲ್ಲಿ ಹಾವೇರಿ ಅನ್ನದಾತರು