ಕಾರವಾರ: ಇಷ್ಟು ವರ್ಷಗಳ ಕಾಲ ಮೀನುಗಾರಿಕೆ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದ ಮೀನುಗಾರರಿಗೆ ಇತ್ತೀಚೆಗೆ ಹೆಚ್ಚಾಗಿರುವ ಕಡಲ್ಕೊರೆತ ನೆಮ್ಮದಿ ಕೆಡಿಸಿದೆ. ಕಡಲಮಕ್ಕಳ ಜಮೀನುಗಳನ್ನೇ ಆಹುತಿ ತೆಗೆದುಕೊಳ್ಳುತ್ತಿದೆ. ಅಧಿಕಾರಿಗಳ ಜೊತೆಗೆ ಸ್ವತಃ ಮುಖ್ಯಮಂತ್ರಿಯೇ ಕಡಲ್ಕೊರೆತ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರೂ, ಪರಿಹಾರ ಕಾರ್ಯ ಮಾತ್ರ ಇನ್ನೂ ಕೈಗೊಳ್ಳದೇ ಇರುವುದು ಸಂತ್ರಸ್ತರಿಗೆ ಆತಂಕ ಮೂಡಿಸಿದೆ.
ಕಡಲ್ಕೊರೆತಕ್ಕೆ ನಲುಗಿದ ಹಾರವಾಡ (ETV Bharat) ಹೌದು, ಅಂಕೋಲಾ ತಾಲೂಕಿನ ಹಾರವಾಡ ತರಂಗಮೇಟದಲ್ಲಿ ತಡೆಗೋಡೆ ಕಾಮಗಾರಿ ವಿಳಂಬದಿಂದಾಗಿ ಕಡಲ ತೀರದುದ್ದಕ್ಕೂ ಕಡಲ್ಕೊರೆತ ಹೆಚ್ಚಾಗಿದೆ. ಈಗಾಗಲೇ ಮೂರು ಮನೆಗಳು ಸಂಪೂರ್ಣ ಹಾನಿಯಾಗಿದೆ. 50ಕ್ಕೂ ಹೆಚ್ಚು ತೆಂಗಿನ ಮರಗಳು, ಕೆಲವರ ಸ್ವಂತ ಜಮೀನು ಎಲ್ಲವೂ ಕೊಚ್ಚಿ ಹೋಗಿವೆ. ಅಲ್ಲದೆ ಹೀಗೆ ಕಡಲ್ಕೊರೆತ ಮುಂದುವರಿದಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗುವ ಆತಂಕ ಇದೀಗ ಸ್ಥಳೀಯರಿಗೆ ಶುರುವಾಗಿದೆ.
ಇದೇ ಕಾರಣಕ್ಕೆ ಸಂಬಂಧಪಟ್ಟ ಗ್ರಾಮ ಪಂಚಾಯತಿ ಹಾಗೂ ಸಂಬಂಧಿಸಿದ ಎಲ್ಲಾ ಅಧಿಕಾರಿ, ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಅಲ್ಲದೆ, ಮುಖ್ಯಮಂತ್ರಿಗಳು ಶಿರೂರು ಅವಘಡದ ಕ್ಷೇತ್ರಕ್ಕೆ ಭೇಟಿ ನೀಡಿದಾಗಲೂ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಮುಖ್ಯಮಂತ್ರಿ ಬಂದುಹೋಗಿ ತಿಂಗಳು ಕಳೆದರು ಈವರೆಗೂ ತಡೆಗೋಡೆ ಕಾಮಗಾರಿ ನಡೆದಿಲ್ಲ. ತೋರಿಕೆಗಾಗಿ ಮಣ್ಣಿನ ಚೀಲಗಳನ್ನು ಸ್ವಲ್ಪ ಹಾಕಿದ್ದು, ಅವುಗಳು ಕೂಡ ದೊಡ್ಡ ದೊಡ್ಡ ಅಲೆಗಳು ಬಂದಾಗ ಕೊಚ್ಚಿ ಹೋಗಿವೆ. ಅಷ್ಟೇ ಅಲ್ಲದೆ ಮನೆಗಳು ಸಹ ಕೊಚ್ಚಿ ಹೋಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಇನ್ನೂ ಅನೇಕ ಮನೆ, ಜೀವ ಹಾನಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಡಿಸಿದ್ದಾರೆ.
"ತಡೆಗೋಡೆ ನಿರ್ಮಾಣಕ್ಕೆ ಕೂಡಲೇ ಮುಂದಾಗಬೇಕು. ಸ್ವತಃ ಮುಖ್ಯಮಂತ್ರಿ ಬಂದು ಹೋದರೂ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆ ಜಾಗೃತಗೊಂಡಿಲ್ಲ. ಈ ಬಗ್ಗೆ ಬಂದರು ಇಲಾಖೆ ಅಧಿಕಾರಿಗಳನ್ನು ಕೇಳಿದರೆ ತಮಗೆ ಸಂಬಂಧವೇ ಇಲ್ಲದಂತೆ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಈಗಾಗಲೇ ಹಲವು ಮನೆಗಳಿಗೆ ಹಾನಿಯಾಗಿದ್ದು, ಇನ್ನು ಹೀಗೆ ಮುಂದುವರಿದಲ್ಲಿ ನೂರಾರು ಮನೆಗಳು ಸಂಕಷ್ಟಕ್ಕೆ ಸಿಲುಕಲಿವೆ. ಕೂಡಲೇ ಈ ಬಗ್ಗೆ ಸರ್ಕಾರ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು" ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಉಡುಪಿ: ಕಡಲ್ಕೊರೆತ, ನೆರೆ ಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ - lakshmi hebbalkar