ಕರ್ನಾಟಕ

karnataka

ETV Bharat / state

ಬ್ಯಾಂಕ್ ರಿವಾರ್ಡ್ಸ್ ಪಾಯಿಂಟ್ಸ್​ ಹೆಸರಿನ ಲಿಂಕ್ ಕ್ಲಿಕ್: HAL ಹೆಲಿಕಾಪ್ಟರ್ ವಿಭಾಗದ ಮ್ಯಾನೇಜರ್‌ ಖಾತೆಗೆ ಕನ್ನ - CYBER CRIME

ಬ್ಯಾಂಕ್ ರಿವಾರ್ಡ್ಸ್​ ಪಾಯಿಂಟ್ಸ್ ಹೆಸರಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ ಹೆಚ್​ಎಎಲ್ ಹೆಲಿಕಾಪ್ಟರ್ ವಿಭಾಗದ ಮ್ಯಾನೇಜರ್​ವೊಬ್ಬರು 50 ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ.

ಬೆಂಗಳೂರು ಸೈಬರ್ ವಂಚನೆ ಪ್ರಕರಣ
ಬೆಂಗಳೂರು ಸೈಬರ್ ವಂಚನೆ ಪ್ರಕರಣ (ETV Bharat)

By ETV Bharat Karnataka Team

Published : Jan 21, 2025, 7:39 AM IST

ಬೆಂಗಳೂರು:ಸೈಬರ್ ಅಪರಾಧಗಳ ತಡೆಗೆ ಪೊಲೀಸರು ತಮ್ಮ ತನಿಖಾ ವಿಧಾನಗಳಲ್ಲಿ ಅಪ್ಡೇಟ್‌ ಆದಂತೆ ವಂಚನೆಗಳಿಗಾಗಿ ಖದೀಮರು ಅನುಸರಿಸುವ ಮಾರ್ಗಗಳನ್ನ ಸಹ ಬದಲಿಸುತ್ತಿದ್ದಾರೆ‌. ಡಿಜಿಟಲ್ ಅರೆಸ್ಟ್, ಆಮಂತ್ರಣ ಪತ್ರಿಕೆ ಹೆಸರಿನಲ್ಲಿ ಫೈಲ್ ಸಂದೇಶ ಕಳಿಸಿ ವಂಚಿಸುತ್ತಿದ್ದ ವಂಚಕರು ಇದೀಗ ಬ್ಯಾಂಕ್ ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ವಂಚಿಸಲಾರಂಭಿಸಿದ್ದಾರೆ.

14 ಸಾವಿರ ಮೌಲ್ಯದ ರಿವಾರ್ಡ್ ಪಾಯಿಂಟ್ಸ್ ಹೆಸರಲ್ಲಿ ಹೆಚ್ಎಎಲ್‌ನ ಹೆಲಿಕಾಪ್ಟರ್ ವಿಭಾಗದ ಮ್ಯಾನೇಜರ್‌ಗೆ ಖದೀಮರು ವಂಚಿಸಿರುವ ಪ್ರಕರಣ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.

ದೂರುದಾರರಿಗೆ 14,453 ರೂ. ಮೌಲ್ಯದ ಬ್ಯಾಂಕ್ ರಿವಾರ್ಡ್ ಪಾಯಿಂಟ್ ಹೆಸರಿನಲ್ಲಿ ಲಿಂಕ್‌ವೊಳಗೊಂಡ ಸಂದೇಶವೊಂದನ್ನು ಆರೋಪಿಗಳು ಕಳಿಸಿದ್ದಾರೆ. ಸಂದೇಶವನ್ನ ನಿಜವೆಂದು ನಂಬಿದ್ದ ದೂರುದಾರರು, ಲಿಂಕ್ ಕ್ಲಿಕ್ ಮಾಡಿದಾಗ ಇಂಟರ್ನೆಟ್ ಬ್ಯಾಂಕಿಂಗ್ ಲಾಗಿನ್ ಆಗುವಂತೆ ಕೇಳಲಾಗಿದೆ. ಅದರಂತೆ ಹೈಯರ್ ಸೆಕ್ಯುರಿಟಿ ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗುತ್ತಿದ್ದಂತೆಯೇ ಖಾತೆಯಿಂದ 50 ಸಾವಿರ ರೂ. ಕಡಿತವಾಗಿದೆ. ತಕ್ಷಣ ಎಚ್ಚೆತ್ತ ದೂರುದಾರರು ತಮ್ಮ ಖಾತೆಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನ ಸ್ಥಗಿತಗೊಳಿಸಿದ್ದರಿಂದ ಮತ್ತಷ್ಟು ಹಣ ವಂಚಕರ ಪಾಲಾಗುವುದು ತಪ್ಪಿದಂತಾಗಿದೆ.

ಹಣ ಕಳೆದುಕೊಂಡ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಬೈಲ್ ಗಿಫ್ಟ್ ಕಳಿಸಿ ಬ್ಯಾಂಕ್​ ಖಾತೆಗೆ ಕನ್ನ ಹಾಕ್ತಾರೆ ಹುಷಾರ್ :ಸೈಬರ್ ವಂಚಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಂಚನೆಗೆ ಅನುಕೂಲ ಆಗುವಂತಹ ಆ್ಯಪ್​ಗಳನ್ನು ಮೊಬೈಲ್​ಗಳಲ್ಲಿ ಇನ್​ಸ್ಟಾಲ್ ಮಾಡಿ ಅವುಗಳನ್ನೇ ಬ್ಯಾಂಕ್​ ಹೆಸರನಲ್ಲಿ ಜನರಿಗೆ ಗಿಫ್ಟ್ ಆಗಿ ಕಳುಹಿಸುತ್ತಾರೆ. ಜನರು, ಆ ಮೊಬೈಲ್​ಗೆ ಸಿಮ್ ಹಾಕಿದ ಬಳಿಕ ಅವರ ಬ್ಯಾಂಕ್ ಖಾತೆಯಿಂದ ಹಣ ಎಗರಿಸುತ್ತಾರೆ. ಬ್ಯಾಂಕ್ ಖಾತೆಯಿಂದ ಹಣ ಕಟ್ ಆದ ಸಂದೇಶ ಕೂಡ ಬರದಂತೆ ಮಾಡುತ್ತಾರೆ.

ಹೀಗೆ ಇತ್ತೀಚೆಗಷ್ಟೆ ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ವಂಚಕರು ಗಿಫ್ಟ್ ಹೆಸರಲ್ಲಿ ಮೊಬೈಲ್ ಕಳುಹಿಸಿ ಬಳಿಕ, ಅವರ ಖಾತೆಯಿಂದ 2.8 ಕೋಟಿ ರೂ. ಎಗರಿಸಿದ್ದರು. ಈ ಕುರಿತು ವೈಟ್ ಫೀಲ್ಡ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಂಪ್ಡ್ ಡೆಪಾಸಿಟ್ ಸ್ಕ್ಯಾಮ್? ಯುಪಿಐ ಮೂಲಕ ಮೊಬೈಲ್ ಬ್ಯಾಂಕಿಂಗ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಮಾಡುವ ಈ ಮೋಸದ ವಂಚನೆಯೇ ಜಂಪ್ಡ್ ಡಿಪಾಸಿಟ್ ಸ್ಕ್ಯಾಮ್​. ವಂಚಕ ಮೊದಲು ನಿಮ್ಮ ಖಾತೆಗೆ 5 ಸಾವಿರ ರೂ. ಅಥವಾ ಅದಕ್ಕಿಂತ ಕಡಿಮೆ ಹಣ ಜಮಾ ಮಾಡ್ತಾನೆ. ನಂತರ ಹಣ ಪಡೆದಿದ್ದೀರಿ ಎಂದು ಸಂದೇಶದ ಜೊತೆಗೆ ಲಿಂಕ್ ಒತ್ತಿ ಎಂಬ ಮನವಿಯನ್ನು ಫೋನ್​ನಲ್ಲಿ ಕಳುಹಿಸುತ್ತಾನೆ. ಹಾಗೆ ಕಳುಹಿಸಿ ಲಿಂಕ್ ಕ್ಲಿಕ್ ಮಾಡಿದಾಗ ಯುಪಿಐ ಪಿನ್ ಕೇಳುತ್ತದೆ. ಪಿಎನ್ ಹಾಕಿದರೆ ಕ್ಷಣಾರ್ಧದಲ್ಲಿ ನಿಮ್ಮ ಖಾತೆ ಖಾಲಿಯಾಗುತ್ತದೆ. ಹೀಗಾಗಿ ಅಪರಿಚಿತ ನಂಬರ್​​ಗಳಿಂದ ನಿಮ್ಮ ಖಾತೆಗೆ ಹಣ ಸಂದಾಯವಾಗಿದೆ ಎಂದು ಬಂದ ಸಂದೇಶಗಳನ್ನು ಸ್ವೀಕರಿಸಿದರೆ ಯಾವ ಲಿಂಕ್​​ಗಳ ಮೇಲೂ ಕ್ಲಿಕ್​ ಮಾಡಬೇಡಿ.

ಇದನ್ನೂ ಓದಿ:ಹೆಚ್ಚುತ್ತಿವೆ ಆನ್​ಲೈನ್​ ವಂಚನೆ ಪ್ರಕರಣಗಳು; ಪೊಲೀಸರು ನೀಡಿರುವ ಈ ಸೈಬರ್ ಸುರಕ್ಷತೆಯ ಟಿಪ್ಸ್​ ಪಾಲಿಸಿ

ಇದನ್ನೂ ಓದಿ:ಬೆಂಗಳೂರಲ್ಲಿ ಸೈಬರ್ ವಂಚನೆಗೆ 1800 ಕೋಟಿಗೂ ಅಧಿಕ ಹಣ ಲೂಟಿ: ಗೋಲ್ಡನ್ ಅವರ್ ಬಗ್ಗೆ ತಿಳಿದು ಜಾಗೃತರಾಗಿ!

ಇದನ್ನೂ ಓದಿ: ದೇಶವನ್ನೇ ಬೆಚ್ಚಿಬೀಳಿಸಿದ ಟೆಕ್-ಸೈಬರ್ ಸ್ಕ್ಯಾಮ್​ಗಳ ಹಿನ್ನೋಟ ಇದು!

ABOUT THE AUTHOR

...view details