ಬೆಂಗಳೂರು:ರಾಜ್ಯಪಾಲರ ಭಾಷಣದಲ್ಲಿ ಉಪ್ಪು, ಹುಳಿ, ಖಾರ ಏನೂ ಇಲ್ಲ. ಇದೊಂದು ಜಾಹೀರಾತುಗಳಿಂದ ನಡೆಯುತ್ತಿರುವ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಒಂದು ಕಡೆ ಬರಗಾಲ, ಕೇಂದ್ರ ಸರ್ಕಾರದಿಂದ ಹಣ ಬರುತ್ತಿಲ್ಲ ಎನ್ನುವ ಸರ್ಕಾರ. ಇಲ್ಲಿ ನೋಡಿದರೆ ಗಂಜಿ ಕೇಂದ್ರಗಳನ್ನು ಸೃಷ್ಟಿ ಮಾಡಿ 90 ಮಂದಿಗೆ ಸಂಪುಟ ದರ್ಜೆ ನೀಡಿದೆ. ಅದರಲ್ಲಿ 77 ಶಾಸಕರಿಗೆ ಸಂಪುಟ ದರ್ಜೆ ಭಾಗ್ಯ ನೀಡಿದ್ದರೆ, ಸಿಎಂ ಕಚೇರಿಯಲ್ಲಿ 9 ಜನರಿಗೆ ಸಂಪುಟ ಭಾಗ್ಯ ಕರುಣಿಸಲಾಗಿದೆ. ರಾಜ್ಯದ ಆಡಳಿತಾತ್ಮಕ ಇತಿಹಾಸದಲ್ಲಿಯೂ ಇಷ್ಟು ಬೇಕಾಬಿಟ್ಟಿಯಾಗಿ ಅಧಿಕಾರ ಹಂಚಿಕೆ ಮಾಡಿ ಖಜಾನೆಗೆ ನಷ್ಟ ಉಂಟು ಮಾಡಲಾಗಿದೆ ಎಂದು ದೂರಿದರು.
ಕ್ಯಾಬಿನೆಟ್ ದರ್ಜೆಗೆ ಲೆಕ್ಕ ಬೇಡವೇ?:ಕ್ಯಾಬಿನೆಟ್ ದರ್ಜೆ ಅದಕ್ಕೊಂದು ಲೆಕ್ಕ ಬೇಡವೇ? ಉಪಮುಖ್ಯಮಂತ್ರಿ ಅವರ ಆರೋಗ್ಯ ತಪಾಸಣೆ ಮಾಡುವ ವೈದ್ಯರಿಗೂ ಕ್ಯಾಬಿನೆಟ್ ದರ್ಜೆ, ಕಲೆಕ್ಷನ್ ಮಾಡಿಕೊಡುವ ಅಸಾಮಿಗೂ ಕ್ಯಾಬಿನೆಟ್ ದರ್ಜೆ. ಕರ್ನಾಟಕ ಹಣಕಾಸು ಸಂಸ್ಥೆ (KSFC) ಅಧ್ಯಕ್ಷರನ್ನಾಗಿ ಶಾಸಕರನ್ನು ನೇಮಕ ಮಾಡುತ್ತಿರುವುದು ಉಂಟಾ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಪ್ರತೀ ವರ್ಷ ನಡೆಯುವ ಶಾಸ್ತ್ರವಷ್ಟೇ. ಪ್ರತಿ ವರ್ಷದ ಸಂಪ್ರದಾಯದಂತೆ ವಿಧಾನಸಭೆ ಕಲಾಪಗಳು ನಡೆಯುತ್ತವೆ. ಸರ್ಕಾರದ ಮುಂದಿನ ವರ್ಷದ ನೀಲನಕ್ಷೆ ಹಾಗೂ ಸಾಧನೆಗಳ ನೋಟವನ್ನು ಕೊಡಬೇಕು. ಅದನ್ನು ಮಾಡದ ಕೆಲಸಗಳ ಬಗ್ಗೆ ಡಂಗುರ ಹೊಡೆಯುವ ಕೆಲಸ ಅಷ್ಟೇ ಆಯಿತು. ಸರ್ಕಾರದ ಸಾಧನೆಗಳ ಬಗ್ಗೆ ರಾಜ್ಯಪಾಲರಿಂದ ಭಾಷಣ ಕೇಳಿದ್ದೇವೆ. ಆದರೆ, ಈ ಭಾಷಣ ಹಾಡಿದ್ದೇ ಹಾಡೋ ಕಿಸಬಾಯಿ ದಾಸ ಎನ್ನುವ ರೀತಿಯಲ್ಲಿದೆ ಎಂದು ಟೀಕಿಸಿದರು.
ಜನ ಇವರಿಗೆ ಸ್ಪಷ್ಟ ಬಹುಮತದ ಸರ್ಕಾರ ಕೊಟ್ಟಿದ್ದಾರೆ. ಆದರೆ, ಇವರು ಅಸ್ಪಷ್ಟವಾಗಿ ಆಡಳಿತ ನಡೆಸುತ್ತಿದ್ದಾರೆ. ಗ್ಯಾರಂಟಿಗಳ ಬಗ್ಗೆ ಪ್ರತಿದಿನವೂ ಮಾಧ್ಯಮಗಳಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ಆದರೆ, ಕೇವಲ ಜನರಿಗೆ ಸರಿಯಾಗಿ ತಲುಪದ ಗ್ಯಾರಂಟಿಗಳ ಬಗ್ಗೆ ಗೌರವಾನ್ವಿತ ರಾಜ್ಯಪಾಲರಿಂದ ಸುಳ್ಳು ಭಾಷಣ ಮಾಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸರ್ಕಾರ ನುಡಿದಂತೆ ನಡೆದಿದ್ದರೆ ನಾನು ಖಂಡಿತಾ ಮೆಚ್ಚುತ್ತಿದ್ದೆ. ಆದರೆ ಇವರು ಎಲ್ಲಿಯೂ ನುಡಿದಂತೆ ನಡೆದಿಲ್ಲ. ಅದಕ್ಕೆ ನಾನು ಹೇಳಿದ್ದು. ರಾಜ್ಯಪಾಲರ ಭಾಷಣದಲ್ಲಿ ಉಪ್ಪು, ಖಾರ, ಹುಳಿ ಇಲ್ಲ ಎಂದು. ಇದರ ಬಗ್ಗೆ ನಾನು ಏನು ಮಾತಾಡಲಿ?. ಹದಿನೈದು ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯನವರು, ಎರಡನೇ ಬಾರಿಗೆ ಮುಖ್ಯಮಂತ್ರಿ ಆದವರು. ರಾಜ್ಯಪಾಲರಿಂದ ಮಾಡಿಸುವ ಭಾಷಣವೇ ಇದು?. ಇದು ಅತ್ಯಂತ ಕಳಪೆ ಭಾಷಣ ಎಂದು ದೂರಿದರು.
ಗ್ಯಾರಂಟಿಗಳ ಬಗ್ಗೆ..: ಗ್ಯಾರಂಟಿಗಳ ಬಗ್ಗೆ ದೇಶ ವಿದೇಶದಲ್ಲಿ ಅಧ್ಯಯನ ಮಾಡುತ್ತಿದ್ದಾರಂತೆ. ಅಧ್ಯಯನ ಮಾಡುವವರಿಗೆ ವಾಸ್ತವ ಚಿತ್ರಣ ಗೊತ್ತಿದ್ದಂತೆ ಇಲ್ಲ. ಹಾವೇರಿ ಜಿಲ್ಲೆಯ ತಾಯಿ ಮಗ ಕೆಲಸಕ್ಕಾಗಿ ಗೋವಾಕ್ಕೆ ಗುಳೆ ಹೋದರು. ಅಲ್ಲಿಯೂ ಕೆಲಸ ಸಿಗಲಿಲ್ಲ ಎಂದು ರೈಲಿನಲ್ಲಿ ಊರಿಗೆ ವಾಪಸ್ ಬರುವಾಗ ಟಿಕೆಟ್ ಇರಲಿಲ್ಲ. ರೈಲಿನ ಟಿಕೆಟ್ ತಪಾಸಣೆ ಮಾಡುವವನು ಅವರಿಬ್ಬರನ್ನು ಧಾರವಾಡ ಜಿಲ್ಲೆಯ ಆಳ್ನಾವರದಲ್ಲಿ ರೈಲಿನಿಂದ ಇಳಿಸಿಬಿಟ್ಟ.
ಮೂರು ದಿನ ಉಪವಾಸ ಬಿದ್ದ ಆ ತಾಯಿಮಗ ಸುಸ್ತಾಗಿದ್ದರು. ತಾಯಿಗಾಗಿ ಅನ್ನ ಹುಡುಕಲು ಹೊರಟ ಮಗನಿಗೆ ಅನ್ನವೂ ಸಿಗಲಿಲ್ಲ, ಕೆಲಸವೂ ಧಕ್ಕಲಿಲ್ಲ. ಕೊನೆಗೆ ಅದೇ ಊರಿನಲ್ಲಿ ಆ ಯುವಕ ಆತ್ಮಹತ್ಯೆ ಮಾಡಿಕೊಂಡ. ಗ್ಯಾರಂಟಿಗಳು ಪರಿಣಾಮಕಾರಿಯಾಗಿ ಜಾರಿ ಆಗಿ ಅವು ಎಲ್ಲರಿಗೂ ತಲುಪಿದ್ದಿದ್ದರೆ, ಆ ತಾಯಿ ಮಗ ಗೋವಾಕ್ಕೆ ಯಾಕೆ ಹೋಗುತ್ತಿದ್ದರು? ಆ ಯುವಕ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ? ಎಂದು ಆಕ್ರೋಶ ವ್ಯಕ್ತಪಡಿಸಿದರು.