ಬೆಂಗಳೂರು: ನನ್ನನ್ನು ಸಿಎಂ ಸ್ಥಾನದಿಂದ ಇಳಿಸಲು ಸಿದ್ದೌಷಧ ಅರೆದವರು ಯಾರು ಅಂತ ಸಿದ್ದರಾಮಯ್ಯರನ್ನೇ ಕೇಳಲಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಇಂದು ಆದಿಚುಂಚನಗಿರಿ ಶಾಖಾ ಮಠದಿಂದ ತೆರಳುವ ವೇಳೆ ಮಾತನಾಡಿದ ಅವರು, ನಮ್ಮ ಒಕ್ಕಲಿಗ ಸಿಎಂ ಇಳಿಸಿದ್ರಲ್ಲ ಅದನ್ನು ಕೇಳುವ ಶಕ್ತಿ ಸ್ವಾಮೀಜಿಗೆ ಇದ್ಯೋ ಇಲ್ವೋ ಗೊತ್ತಿಲ್ಲ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಯಾಕೆ ಸರ್ಕಾರ ಬೀಳಿಸ್ತಾರೆ?. ನಾನು ಯಾವತ್ತೂ ಮಠದ, ಶ್ರೀಗಳ ಹೆಸರು ದುರುಪಯೋಗಪಡಿಸಿಕೊಂಡಿಲ್ಲ. ನಾನು ಡಿಕೆಶಿಯಿಂದ ಕಲಿಯಬೇಕಿಲ್ಲ. ಡಿಕೆಶಿ ಅವರ ಹೇಳಿಕೆಯನ್ನು ನಮ್ಮ ಸಮಾಜ ಗಮನಿಸುತ್ತದೆ. ಅದನ್ನು ಪ್ರಶ್ನೆ ಮಾಡುತ್ತದೆ. ಸರ್ಕಾರ ಬೀಳಿಸಿದ್ದನ್ನು ಸ್ವಾಮೀಜಿ ಯಾಕೆ ಪ್ರಶ್ನೆ ಮಾಡಬೇಕು? ಎಂದು ತಿರುಗೇಟು ಕೊಟ್ಟರು.
ಸ್ವಾಮೀಜಿ ಕೇಳಲಿ ಅಂತ ಮಹಾನ್ ನಾಯಕ ಹೇಳ್ತಾರಲ್ಲಾ, ಅವರ ಪಕ್ಷದ ಇನ್ನೊಬ್ಬ ನಾಯಕರ ಜತೆ ಸಂಘರ್ಷ ನಡೀತಿದೆಯಲ್ಲವೇ, ಅದರ ಬಗ್ಗೆ ಮಾತಾಡಲಿ. ಸಿದ್ದರಾಮಯ್ಯ ಜತೆ ಪಕ್ಕ ಪಕ್ಕ ಕೂತ್ಕೊಂಡು ಮಾತಾಡ್ತಾರೆ. ಸಿದ್ದೌಷಧ ಅರೆದವರು ಯಾರು ಅಂತ ಸಿದ್ದರಾಮಯ್ಯರನ್ನೇ ಕೇಳಲಿ. ಸ್ವಾಮೀಜಿ ಯಾಕೆ ಕೇಳಬೇಕು ಎಂದು ಟಾಂಗ್ ನೀಡಿದರು.
ಪೂಜ್ಯ ಶ್ರೀಗಳನ್ನು ಭೇಟಿ ಮಾಡಿ ಅವರನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಮೊನ್ನೆ ಕಾಂಗ್ರೆಸ್ ಮಾಡಿದೆ. ಜಾತ್ಯತೀತ ಅಂತ ಹೇಳಿಕೊಳ್ಳುವ ಇವರು ಯಾವ ಜಾತ್ಯತೀತರು?. ಸರ್ಕಾರ ಬೀಳಿಸಿದ ಬಗ್ಗೆ ಸ್ವಾಮೀಜಿ ಯಾಕೆ ಮಾತಾಡಬೇಕು?. ರಾಜಕೀಯಕ್ಕೂ ಸ್ವಾಮೀಜಿಗಳಿಗೂ ಏನು ಸಂಬಂಧ?. ಧಾರ್ಮಿಕವಾಗಿ ಸ್ವಾಮೀಜಿ ನಮ್ಮ ಗುರುಗಳು, ಅವರನ್ನು ಯಾಕೆ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದರು.
ಮೇಕೆದಾಟು ಪಾದಯಾತ್ರೆ ವೇಳೆ ತೂರಾಡಿದ್ದು ಯಾರು?:ಜೆಡಿಎಸ್ ಪಕ್ಷದ ಹೆಡ್ ಆಫೀಸ್‌ನಂತಿರುವ ಬಿಡದಿ ತೋಟದ ಮನೆಯಿಂದ ಮದ್ಯ ಹಾಗೂ ಬಾಡೂಟದ ಘಮಲು ಹೊರಬರುತ್ತಿದೆಯಂತೆ ಎಂಬ ಕಾಂಗ್ರೆಸ್ ಟ್ವೀಟ್ಗೆ ಪ್ರತಿಕ್ರಿಯಿಸಿ, ಅದೇನೋ ಟ್ವೀಟ್ ಮಾಡಿದ್ದಾರೆ ಕಾಂಗ್ರೆಸ್‌ನವರು. ನಾನು ತೂರಾಡಲಿಲ್ಲ, ಮೇಕೆದಾಟು ಕಾರ್ಯಕ್ರಮದಲ್ಲಿ ತೂರಾಡಿದ್ದು ಯಾರು?. ಮಧ್ಯಾಹ್ನದ ಹೊತ್ತಿಗೇ ತೂರಾಡ್ತಾರಾ?. ಕಾಂಗ್ರೆಸ್‌ನವರು ಎಚ್ಚರಿಕೆಯಿಂದ ಟ್ವೀಟ್ ಮಾಡಲಿ ಎಂದು ಗುಡುಗಿದರು.