ಕರ್ನಾಟಕ

karnataka

ETV Bharat / state

ಕಳೆದ ಚುನಾವಣೆಯಲ್ಲಿ ನಿಖಿಲ್ ಸುತ್ತ ಶಕುನಿವ್ಯೂಹ ರಚಿಸಿದ್ದ ಕಲಿಯುಗ ಶಕುನಿ ಸಿದ್ದರಾಮಯ್ಯ: ಹೆಚ್‌ಡಿಕೆ - Kumarswamy Tweet

ಸಿಎಂ ಸಿದ್ದರಾಮಯ್ಯ ವಿರುದ್ದ ಹೆಚ್​.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್‌ಗಳ​ ಮೂಲಕ ಟೀಕಾಸಮರ ನಡೆಸಿದ್ದಾರೆ.

ಕಳೆದ ಚುನಾವಣೆಯಲ್ಲಿ ನಿಖಿಲ್ ಸುತ್ತ ಶಕುನಿವ್ಯೂಹ ರಚಿಸಿದ್ದ ಕಲಿಯುಗ ಶಕುನಿ ಸಿದ್ದರಾಮಯ್ಯ: ಹೆಚ್ಡಿಕೆ ವಾಗ್ದಾಳಿ
ಕಳೆದ ಚುನಾವಣೆಯಲ್ಲಿ ನಿಖಿಲ್ ಸುತ್ತ ಶಕುನಿವ್ಯೂಹ ರಚಿಸಿದ್ದ ಕಲಿಯುಗ ಶಕುನಿ ಸಿದ್ದರಾಮಯ್ಯ: ಹೆಚ್ಡಿಕೆ ವಾಗ್ದಾಳಿ

By ETV Bharat Karnataka Team

Published : Mar 10, 2024, 10:03 PM IST

ಬೆಂಗಳೂರು: ಕಳೆದ ಬಾರಿ ಸುಮಲತಾ ಗೆದ್ದಿದ್ದು ಕಾಂಗ್ರೆಸ್ ಮತಗಳಿಂದ ಎಂದು ಸಿಎಂ ಸಿದ್ದರಾಮಯ್ಯ ಸತ್ಯ ಬಾಯ್ಬಿಟ್ಟಿದ್ದಾರೆ. ಹಾಗಾದರೆ ಅಂದು ನಮಗೆ ನೀವು ನಂಬಿಕೆ ದ್ರೋಹ ಮಾಡಿದ್ದೀರಿ, ಪ್ರಚಾರದ ಸೋಗಿನಾಟವಾಡಿ, ಮಾಧ್ಯಮಗಳ ಮುಂದೆ ಗೆಲ್ಲಿಸುತ್ತೇವೆಂದು ಪೋಸು ಕೊಡುತ್ತಲೇ ಮೈತ್ರಿ ಅಭ್ಯರ್ಥಿ ನಿಖಿಲ್ ಸುತ್ತ ಶಕುನಿವ್ಯೂಹವನ್ನೇ ರಚಿಸಿದ ಕಲಿಯುಗ ಶಕುನಿ ನೀವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ಗ್ಯಾರಂಟಿಗಳ 2ನೇ ಸಮಾವೇಶದಲ್ಲಿ ಅಲವತ್ತುಕೊಂಡ ಸಿಎಂ ಸಿದ್ದರಾಮಯ್ಯನವರೇ ಕೊನೆಗೂ ಸತ್ಯ ನುಡಿದಿದ್ದೀರಿ. ಸುಳ್ಳುರಾಮಯ್ಯ ಬಿರುದಾಂಕಿತರಾದ ನೀವು, ಕೊನೆಗೂ ಸತ್ಯ ಕಕ್ಕಿದ್ದೀರಿ. ಸುಳ್ಳುರಾಮಯ್ಯನೆಂಬ ಕುಖ್ಯಾತಿಯಿಂದ ಹೊರಬರಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೀರಿ, ಹಾಗಾಗಿ ನಿಮಗೆ ಅಭಿನಂದನೆಗಳು.

ಸತ್ಯ ಗಂಟಲಲ್ಲಿ ಸಿಕ್ಕಿಕೊಂಡ ಬಿಸಿತುಪ್ಪದಂತೆ ಕಕ್ಕಲೇಬೇಕು. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಆಯ್ಕೆಯಾದ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ಸೇ ಕಾರಣ ಎಂದು ಸ್ವತಃ ನೀವೇ ಒಪ್ಪಿಕೊಂಡಿದ್ದೀರಿ. ನಿಮ್ಮದೇ ಮಾತುಗಳಲ್ಲಿ ಹೇಳುವುದಾದರೆ ಸುಮಲತಾ ಬಿಜೆಪಿಯಿಂದ ಗೆದ್ದಿದ್ದಲ್ಲ ಕಾಂಗ್ರೆಸ್‌ ವೋಟುಗಳಿಂದಲೇ ಗೆದ್ದಿದ್ದು ಆಯಮ್ಮ. ಇದಲ್ಲವೇ ನಂಬಿಕೆದ್ರೋಹ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಗೋಮುಖವ್ಯಾಘ್ರತನ ಅರಿಯಲು ಇಷ್ಟು ಸಾಕು. ಅಂದು ಕಾಂಗ್ರೆಸ್ ಮೈತ್ರಿ ಪಕ್ಷ, ನಿಖಿಲ್‌ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ. ಅವರ ಜತೆಯಲ್ಲೇ ಪ್ರಚಾರದ ಸೋಗಿನಾಟವಾಡಿ, ಮಾಧ್ಯಮಗಳ ಮುಂದೆ ಗೆಲ್ಲಿಸುತ್ತೇವೆಂದು ಪೋಸು ಕೊಡುತ್ತಲೇ ನಿಖಿಲ್ ಸುತ್ತ ಶಕುನಿವ್ಯೂಹವನ್ನೇ ರಚಿಸಿದ ಕಲಿಯುಗ ಶಕುನಿ ನೀವಲ್ಲದೆ ಮತ್ತ್ಯಾರು ಸಿದ್ದರಾಮಯ್ಯನವರೇ? ಕಳ್ಳಬೆಕ್ಕು ಕದ್ದು ಹಾಲು ಕುಡಿದರೆ ಗೊತ್ತಾಗದೇ? ಬೂದಿ ಮುಚ್ಚಿದ ಕೆಂಡ ತಣ್ಣಗಿರಲು ಸಾಧ್ಯವೇ? ಕುದಿಯುವ ಕುಲುಮೆಯಂತಿರುವ ನಿಮ್ಮ ಉದರಹುರಿಗೆ ತಂಪೆನ್ನುವುದುಂಟೆ?, 5 ವರ್ಷಗಳ ನಂತರವಾದರೂ ಸತ್ಯ ಕಕ್ಕಿದ್ದೀರಿ ಹಾಗೂ ನಂಬಿದವನ ಮನೆ ನಾಶವಾಗಲಿ ಎನ್ನುವ ನಿಮ್ಮ ಹೇಯತನ ಬಯಲಾಗಿದೆ. ಸತ್ಯಮೇಯ ಜಯತೇ. ಇದಿಷ್ಟೇ ನನ್ನ ಕಳಕಳಿ ಮತ್ತು ನಂಬಿಕೆ.

ಸಕ್ಕರೆ ಕಾರ್ಖಾನೆ ಬಗ್ಗೆ ಹೇಳಿದ್ದೀರಿ. ಬಜೆಟ್‌ನಲ್ಲಿ ‌ಘೋಷಣೆ ಮಾಡಿದ್ದೀರಿ, ಸರಿ, ದುಡ್ಡು ಎಲ್ಲಿಟ್ಟಿದ್ದೀರಿ. ನಾನು 2019ರ ಬಜೆಟ್‌ ನಲ್ಲಿಯೇ ಈ ಕಾರ್ಖಾನೆಗೆ 100 ಕೋಟಿ ತೆಗೆದಿರಿಸಿದ್ದೆ. ಎಲ್ಲಿ ಹೋಯಿತು ಆ ದುಡ್ಡು? ಇದರ ಬಗ್ಗೆ ಗ್ಯಾರಂಟಿ ಸಮಾವೇಶದಲ್ಲಿ ಚಕಾರ ಎತ್ತಿಲಿಲ್ಲವೇಕೆ ಸಿದ್ದರಾಮಯ್ಯನವರೇ? ಇಂಥ ಆತ್ಮವಂಚನೆ ಏತಕ್ಕೆ? ತನ್ನ ತಲೆಗೇ ಹರಳೆಣ್ಣೆ ಇಲ್ಲ, ಪಕ್ಕದವನಿಗೆ ಸಂಪಂಗೆಣ್ಣೆ ಕೊಟ್ಟನಂತೆ ನಿಮ್ಮಂಥವನೊಬ್ಬ! ನಿಮ್ಮ ವೈಖರಿ ಹಾಗಿದೆ. ಕನ್ನಡಿಗರು ಬರದ ಬೆಂಕಿಯಲ್ಲಿ ಬೇಯುತ್ತಿದ್ದರೆ ನಿಮ್ಮ ಸರಕಾರ ಕದ್ದೂಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ. ಒಂದು ಕೈಲಿ ಅಗ್ಗದ ಗ್ಯಾರಂಟಿ ಕೊಟ್ಟು ಹತ್ತು ಕೈಗಳಲ್ಲಿ ಬದುಕಿನ ಗ್ಯಾರಂಟಿ ಕಿತ್ತುಕೊಳ್ಳುತ್ತಿದ್ದೀರಿ? ಇದು ನ್ಯಾಯವೇ? ಎಂದು ಹೆಚ್‌ಡಿಕೆ ಟೀಕಾಸಮರ ನಡೆಸಿದ್ದಾರೆ.

ಇದನ್ನೂ ಓದಿ:'ಕಳೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಗೆದ್ದಿದ್ದು ಬಿಜೆಪಿಯಿಂದಲ್ಲ, ಕಾಂಗ್ರೆಸ್ ಓಟ್​ನಿಂದ'

ABOUT THE AUTHOR

...view details