ಮಂಡ್ಯ:ನಾಗಮಂಗಲದಲ್ಲಿ ಬುಧವಾರ ಸಂಜೆ ಗಣೇಶ ನಿಮಜ್ಜನ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಘಟನೆಯನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಸಿಎಂ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
'ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಗಣಪತಿ ದೇವರ ಮೆರವಣಿಗೆಯಲ್ಲಿ ಶಾಂತಿಯುತವಾಗಿ ತೆರಳುತ್ತಿದ್ದ ಭಕ್ತರನ್ನು ಗುರಿ ಮಾಡಿ ದಾಂಧಲೆ ಎಬ್ಬಿಸಿರುವುದು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ವೈಫಲ್ಯವಾಗಿರುವುದಕ್ಕೆ ಸಾಕ್ಷಿ' ಎಂದು ಅವರು ಬರೆದುಕೊಂಡಿದ್ದಾರೆ.
'ಪೊಲೀಸ್ ಠಾಣೆ ಎದುರು ರಕ್ಷಣೆ ಕೊಡಿ ಎಂದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆಯೇ ದಬ್ಬಾಳಿಕೆ ನಡೆಸುತ್ತಾರೆ ಎಂದರೆ ನಾವು ಎಲ್ಲಿದ್ದೇವೆ ಎನ್ನುವ ಅನುಮಾನ ಬರುತ್ತದೆ. ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ. ಓಲೈಕೆ, ತುಷ್ಟೀಕರಣ ರಾಜಕಾರಣ ನಿಲ್ಲಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ದಿನಗಳು ದೂರವಿಲ್ಲ' ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
'ಸಾರ್ವಜನಿಕರು ಶಾಂತಿ ಕಾಪಾಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ. ತಕ್ಷಣವೇ ಪಟ್ಟಣದಲ್ಲಿ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಅಲ್ಲದೆ ಈ ಪ್ರಕರಣ ನೆಪದಲ್ಲಿ ವಿರೋಧ ಪಕ್ಷಗಳ ಮುಖಂಡರು, ಕಾರ್ಯಕರ್ತರ ಮೇಲೆ ಪೊಲೀಸರು ದರ್ಪ ತೋರಿದರೆ ಸಹಿಸುವ ಪ್ರಶ್ನೆ ಇಲ್ಲ' ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ನಾಗಮಂಗಲದಲ್ಲಿ ಕಲ್ಲು ತೂರಾಟ:ಗಣೇಶನ ಮೆರವಣಿಗೆ ವೇಳೆ ಜಾಸ್ತಿ ಹೊತ್ತು ಅನ್ಯಕೋಮಿನ ಪ್ರಾರ್ಥನಾ ಮಂದಿರದ ಮುಂದೆ ನಿಂತಿರುವುದಕ್ಕೆ ಎರಡು ಕೋಮುಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಉಂಟಾಗಿದೆ. ಬಳಿಕ ಕಲ್ಲು ತೂರಾಟ ನಡೆದಿದೆ. ಈ ವೇಳೆ ಅಂಗಡಿ ಮತ್ತು ಬೈಕ್ಗಳಿಗೆ ಬೆಂಕಿ ಹಚ್ಚಲಾಗಿದೆ. ಮುಂದಿನ ಮೂರು ದಿನ 144 ಸೆಕ್ಷನ್ ಜಾರಿ ಮಾಡಲಾಗಿದೆ. ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ವೇಳೆ ಕಲ್ಲು ತೂರಾಟ; ಅಂಗಡಿ, ವಾಹನಗಳಿಗೆ ಬೆಂಕಿ, ಇಬ್ಬರು ಪೊಲೀಸರಿಗೆ ಗಾಯ - Stone Pelting In Nagamangala