ಬೆಳಗಾವಿ:''ಭಾರತ ದೇಶದಲ್ಲಿ ಗುರುವಿನ ಮೇಲಿನ ಭಕ್ತಿ ಎಂದಿಗೂ ಕಡಿಮೆಯಾಗುವುದಿಲ್ಲ. ನಮ್ಮ ದೇಶದಲ್ಲಿ ಮಾತ್ರ ಗುರುಪರಂಪರೆ ಗುರುತಿಸಿ, ಗೌರವಿಸುವುದನ್ನು ಕಾಣಬಹುದು'' ಎಂದು ಜ್ಞಾನಪೀಠ ಪುರಸ್ಕೃತ, ನಾಡೋಜ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.
ಘಟಪ್ರಭಾ ಎಸ್ಡಿಟಿ ಪ್ರೌಢಶಾಲೆಯ 1995ರ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಹಾಗೂ ಹಳೆ ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ''ಅನ್ನಕ್ಕೆ ದಾರಿ ದೀಪವಾದ ಗುರುಗಳನ್ನು ದೇವರೆಂದು ಭಾವಿಸುತ್ತೇವೆ. ದೇವರಿಗೆ ಸಮನಾದ ಗುರುಗಳನ್ನು 30 ವರ್ಷಗಳ ನಂತರವೂ ತಾವೆಲ್ಲರೂ ಸೇರಿ ನೆನಪಿಸಿಕೊಂಡು ಗೌರವಿಸುತ್ತಿರುವುದೇ ಈ ನೆಲದ, ನಾಡಿನ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ'' ಎಂದು ಹೇಳಿದರು.
ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಮಾತನಾಡಿ, ''ನಡೆದು ಬಂದ ಹಾದಿ ಮರೆತು ನಡೆಯುವುದು ಆದರ್ಶವಲ್ಲ. ಹಳೇಯ ವಿದ್ಯಾರ್ಥಿಗಳಿಗೆ ಶಾಲೆ, ಗುರುಗಳ ಮೇಲಿರುವ ಪ್ರೀತಿ ನಿಜಕ್ಕೂ ಶ್ಲಾಘನೀಯ'' ಎಂದರು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅರಭಾವಿ ಮಠದ ಶ್ರೀ ಗುರುಬಸವಲಿಂಗ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ''ಈ ಸಂಘದ ಮೂಲಕ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲಿ'' ಎಂದು ಹಾರೈಸಿದರು.