ಬೆಂಗಳೂರು :ವಿಶ್ವ ಜಲ ದಿನಾಚರಣೆಯನ್ನು ವಿನೂತನವಾಗಿ ಆಚರಿಸುವ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಿಗೆ ಗ್ರೀನ್ ಸ್ಟಾರ್ ಚಾಲೆಂಜ್ ಸ್ಪರ್ಧೆಯನ್ನು ಶುಕ್ರವಾರದಿಂದ ಪ್ರಾರಂಭಿಸಲಾಗಿದೆ ಎಂದು ಜಲ ಮಂಡಳಿ ಅಧ್ಯಕ್ಷ ಡಾ ರಾಮಪ್ರಸಾತ್ ಮನೋಹರ್ ಹೇಳಿದರು.
ಶುಕ್ರವಾರ ನಗರದ ಶಾಂಗ್ರಿಲಾ ಹೋಟೆಲ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಮಪ್ರಸಾತ್ ಅವರು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ನೀರನ್ನು ಉಳಿತಾಯ ಮಾಡುವಂತಹ ಎರಿಯೆಟರ್ ಅಳವಡಿಸುವ ಮೂಲಕ ಗ್ರೀನ್ ಸ್ಟಾರ್ ಚಾಲೆಂಜ್ ಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, 30 ದಿನಗಳಲ್ಲಿ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳುವಂತಹ ರೆಸ್ಟೋರೆಂಟ್ ಗಳು ಮತ್ತು ಹೋಟೆಲ್ ಗಳಿಗೆ ಬೆಂಗಳೂರು ಜಲ ಮಂಡಳಿಯ ವತಿಯಿಂದ ಗ್ರೀನ್ ಸ್ಟಾರ್ ರೇಟಿಂಗ್ ನೀಡಲಾಗುವುದು ಎಂದು ತಿಳಿಸಿದರು.
ನೀರಿನ ಉಳಿತಾಯ ಮಾಡುವಂತಹ ತಂತ್ರಜ್ಞಾನಗಳನ್ನ ಅಳವಡಿಸಿಕೊಳ್ಳುವುದು, ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸಿಕೊಳ್ಳಬೇಕು. ಕೊಳವೆ ಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳಬೇಕು. ಮಳೆ ನೀರು ಇಂಗು ಗುಂಡಿಗಳನ್ನ ಅಳವಡಿಸಿಕೊಳ್ಳುವುದು ಹಾಗೂ ಈ ಎಲ್ಲ ಹೊಸ ಅನುಷ್ಠಾನಗಳ ಬಗ್ಗೆ ಗ್ರಾಹಕರಿಗೆ ಹಾಗೂ ಸಿಬ್ಬಂದಿಗೆ ಮಾಹಿತಿ ಕೊಡುವ ಮೂಲಕ ನೀರಿನ ಉಳಿತಾಯದ ಮಹತ್ವವನ್ನು ಸಾರುಬೇಕು. ಈ ಪಂಚ ಸೂತ್ರಗಳನ್ನು ಅಳವಡಿಸಿಕೊಂಡರೆ ಫೈವ್ ಸ್ಟಾರ್ ಗ್ರೀನ್ ರೇಟಿಂಗ್ ನೀಡುವುದಾಗಿ ಘೋಷಿಸಿದರು.
ಇಂದಿನಿಂದ 30 ದಿನಗಳ ಕಾಲ ನಾವು ಹೋಟೆಲ್ಗಳ ನೀರಿನ ಬಳಕೆಯನ್ನು ಮಾನಿಟರಿಂಗ್ ಮಾಡುತ್ತೇವೆ. ಗ್ರೀನ್ ಸ್ಟಾರ್ ರೇಟಿಂಗ್ ಪಡೆಯಲು ಬಯಸುವಂತಹ ಹೋಟೆಲ್ಗಳು ಈ ಎಲ್ಲ ಕ್ರಮಗಳ ಅಳವಡಿಕೆಯ ನಂತರ ಜಲ ಮಂಡಳಿಗೆ ತಿಳಿಸುವುದು ಅವಶ್ಯಕ. ಆನಂತರ ಜಲ ಮಂಡಳಿಯ ಸಿಬ್ಬಂದಿಗಳು ಅಗತ್ಯ ಪರಿಶೀಲನೆಯನ್ನು ಮಾಡುತ್ತಾರೆ. ನಂತರ ಈ ಪಂಚ ಸೂತ್ರಗಳನ್ನು ಅಳವಡಿಸಿಕೊಂಡಿರುವ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ ಗಳಿಗೆ ಗ್ರೀನ್ ಸ್ಟಾರ್ ರೇಟಿಂಗ್ ನೀಡಲಿದ್ದಾರೆ.
ಇದೇ ರೀತಿ ಅಪಾರ್ಟ್ಮೆಂಟ್ಗಳ ಗ್ರೀನ್ ಸ್ಟಾರ್ ರೇಟಿಂಗ್ಗೆ ನಾಳೆ ಚಾಲನೆ ನೀಡಲಾಗುವುದು. ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ವತಿಯಿಂದ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಗ್ರೀನ್ ಸ್ಟಾರ್ ಚಾಲೆಂಜ್ ಅನ್ನ ಪ್ರಾರಂಭಿಸಲಾಗುವುದು ಇದೇ ಪಂಚಸೂತ್ರಗಳ ಆಧಾರದ ಮೇಲೆ ಅಪಾರ್ಟ್ಮೆಂಟ್ ಗಳಿಗೆ ಗ್ರೀನ್ ಸ್ಟಾರ್ ರೇಟಿಂಗ್ ನೀಡಲಾಗುವುದು ಎಂದು ರಾಮಪ್ರಸಾತ್ ಮಾಹಿತಿ ನೀಡಿದರು.
ನೀರು ಅನಗತ್ಯ ಪೋಲು ಮಾಡುವುದರ ವಿರುದ್ಧ ಅಗತ್ಯ ಕ್ರಮ : ಕುಡಿಯುವ ನೀರಿನ ದುರ್ಬಳಕೆ ತಪ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಸೂಚನೆಗಳನ್ನು ನೀಡಲಾಗಿದೆ. ಸರ್ಕಾರಿ ಕಚೇರಿಗಳು ಮನೆಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುವುದು ಕಂಡು ಬಂದಲ್ಲಿ ದಂಡವನ್ನ ವಿಧಿಸಲಾಗುವುದು. ಜನಸಾಮಾನ್ಯರು ಜಲ ಮಂಡಳಿಯ ಈ ಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ಕಣ್ಣುಗಳಾಗಿ ಕಾರ್ಯನಿರ್ವಹಿಸಬೇಕು. ನಗರದ ಯಾವುದೇ ಪ್ರದೇಶದಲ್ಲಿ ಅನಧಿಕೃತವಾಗಿ ಬೋರ್ವೆಲ್ಗಳನ್ನು ಕೊರೆಯುತ್ತಿರುವುದು ಅಥವಾ ನೀರಿನ ದುರ್ಬಳಕೆ ಮಾಡುತ್ತಿರುವುದು ಕಂಡುಬಂದಲ್ಲಿ ಮಂಡಳಿಯ ದೂರವಾಣಿ ಸಂಖ್ಯೆಗೆ ದೂರು ನೀಡಿದಲ್ಲಿ ಅಗತ್ಯ ಕ್ರಮ ಕೈಗೊಳ್ಳುಲಾಗುವುದು ಎಂದು ರಾಮಪ್ರಸಾತ್ ಭರವಸೆ ನೀಡಿದರು.