ತುಮಕೂರು:ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಪೀಠಾಧ್ಯಕ್ಷ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇದೇ ಮೊದಲ ಬಾರಿ ತುಮಕೂರು ನಗರಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಶೋಭಾಯಾತ್ರೆಗೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಚಾಲನೆ ನೀಡಿದರು.
ನಗರದ ಮಹಾವೀರ ಭವನದ ಬಳಿಯಿಂದ ಹೊರಟ ಶೋಭಾಯಾತ್ರೆಯಲ್ಲಿ ಅಭಿನವ ಶ್ರೀಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಲಾಯಿತು. ಅವರೊಂದಿಗೆ ಮಹಿಳೆಯರು ಪೂರ್ಣ ಕುಂಭ ಕಳಸ ಹೊತ್ತು ಸಾಗಿದರೆ, ವಾದ್ಯ ವೃಂದ ಹಾಗೂ ಜೈನ ಸಮುದಾಯದವರು ಶೋಭಾಯಾತ್ರೆಯಲ್ಲಿ ಪಾಲ್ಕೊಂಡು ಪುನೀತರಾದರು. ಶೋಭಯಾತ್ರೆಯು ಎಂ.ಜಿ. ರಸ್ತೆ, ಗುಂಚಿ ಚೌಕ, ಚರ್ಚ್ ಸರ್ಕಲ್, ಮಂಡಿಪೇಟೆ ಸರ್ಕಲ್ ಮಾಗವಾಗಿ ಪಾರ್ಶ್ವನಾಥ ದಿಗಂಬರ ಜಿನಮಂದಿರ ತಲುಪಿತು. ಜಿನಮಂದಿರದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಪೂಜಾದಿಗಳನ್ನು ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿಸಲಾಯಿತು.
ಶೋಭಾಯಾತ್ರೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ಬಸ್ತಿ ಮಠದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ, ಗುಜರಾತ್ ರಾಜ್ಯದ ಗಿರಿನಾರ್ ಕ್ಷೇತ್ರವು ನೇಮಿನಾಥ ಸ್ವಾಮಿಯ ಮೋಕ್ಷ ಸ್ಥಳವಾಗಿದ್ದು, ಅಲ್ಲಿ ಜೈನ ಧರ್ಮದವರಿಗೆ ಪೂಜೆಗೆ ಅವಕಾಶ ಕಲ್ಪಿಸಿಕೊಡಬೇಕು. ಕಳೆದುಹೋದ ಶ್ರದ್ಧಾ ಕೇಂದ್ರವನ್ನು ಮರಳಿ ಜೈನ ಧರ್ಮದವರಿಗೆ ದೊರಕಿಸಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತುಮಕೂರು ನಗರದ ಜೈನ ಭವನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಸ್ವಾಮೀಜಿ, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಚೀತಾಗಳ ಸಂತತಿ ಉಳಿಸಿ ಬೆಳೆಸಲು ಆಫ್ರಿಕಾದಿಂದ ತಂದದ್ದನ್ನು ಸ್ವಾಗತಿಸುತ್ತೇವೆ. ಆದರೆ, ದೇಶದಲ್ಲಿ ಜೈನ ಧರ್ಮ ಅಳಿವಿನ ಅಂಚಿನಲ್ಲಿದ್ದು, ಅದನ್ನು ಉಳಿಸಿ ಬೆಳೆಸಲು ಜೈನ ಧರ್ಮಕ್ಕೆ ಏಕೆ ಅನುದಾನ ಮೀಸಲಿಡುವಲ್ಲಿ ಮುಂದಾಗುತ್ತಿಲ್ಲ? ಯಾಕೆ ವಿಫಲರಾಗುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಜೈನ ಧರ್ಮದ ಶ್ರೀ ನೇಮಿನಾಥ ತೀರ್ಥಂಕರರು ಮೋಕ್ಷಕ್ಕೆ ಹೋಗಿರುವ ಸ್ಥಳವಾಗಿರುವ ಗಿರಿನಾರ್ ಪರ್ವತದಲ್ಲಿ ಪೂಜಾ ವಿಧಿವಿಧಾನಕ್ಕೆ ವಿರೋಧಿಸಲಾಗುತ್ತಿದೆ. ಅಲ್ಲಿಗೆ ಹೋಗುವ ಜೈನರ ಮೇಲೆ ಹಲ್ಲೆ ನಡೆಸಲಾಗುತ್ತಿದ್ದು, ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಅವರು ಎಂದು ಒತ್ತಾಯಿಸಿದರು.