ಹಾವೇರಿ:ಬಿಗ್ ಬಾಸ್ ಸೀಸನ್ 11ರ ವಿಜೇತ ಹನುಮಂತ ಸ್ವಗ್ರಾಮ ಸವಣೂರು ತಾಲೂಕು ಚಿಲ್ಲೂರು ಬಡ್ನಿಗೆ ಆಗಮಿಸಿದ್ದು, ಸವಣೂರು ಪಟ್ಟಣದಲ್ಲಿ ಹನುಮಂತ ಅವರಿಗೆ ಅದ್ಧೂರಿ ಮೆರವಣಿಗೆ ಮೂಲಕ ಸ್ವಾಗತ ಕೋರಲಾಯಿತು.
ತೆರೆದ ವಾಹನದಲ್ಲೇ ಹಾಡು ಹೇಳಿ ರಂಜಿಸಿದ ಹನುಮಂತ; ಬ್ರಹ್ಮಲಿಂಗೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ಯುವಕರು ಗುಲಾಲ್ (ಬಣ್ಣದ ಪುಡಿ) ಎರಚಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ರಸ್ತೆ ಬದಿಗಳಲ್ಲಿ ನಿಂತ ಮಹಿಳೆಯರು ಕೈಬೀಸಿ ಹನುಮಂತ ಅವರಿಗೆ ಅಭಿನಂದನೆ ಸಲ್ಲಿಸಿದರು. ಅಭಿಮಾನಿಗಳು ಕುಣಿದು ಕುಪ್ಪಳಿಸಿದರೆ, ಕೆಲವರು ಹೂವಿನ ಮಾಲೆಯ ಹಾರ ಹಾಕಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಹನುಮಂತ ತೆರೆದ ವಾಹನದಲ್ಲೇ "ಪಾತ್ರಧಾರಿ ನಾವೆಲ್ಲ ಸೂತ್ರಧಾರಿ ಶಿವ ಮ್ಯಾಲ" ಎಂಬ ಹಾಡು ಹೇಳಿ ರಂಜಿಸಿದರು.
ಮತ ಹಾಕಿ ಬೆಂಬಲಿಸಿದವರಿಗೆ ಧನ್ಯವಾದ; ಬಿಗ್ ಬಾಸ್ ವಿನ್ನರ್ ಕಪ್ ಹಿಡಿದು ಹನುಮಂತ ಅಭಿಮಾನಿಗಳತ್ತ ಕೈಬೀಸಿ, ಕೈಮುಗಿದು ತಮ್ಮ ಗೆಲುವಿಗೆ ಕಾರಣರಾದ ಮತ ಹಾಕಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. ಸವಣೂರು ಪಟ್ಟಣದಲ್ಲಿ ಆರಂಭಗೊಂಡು, ಸ್ವಗ್ರಾಮ ಚಿಲ್ಲೂರು ಬಡ್ನಿಯಲ್ಲಿರುವ ಅವರ ಮನೆಯವರೆಗೂ ಅಭಿಮಾನಿಗಳು ಮೆರವಣಿಗೆ ನಡೆಸಿದರು. ಮೆರವಣಿಗೆ ಮೂಲಕ ಮನೆಗೆ ಬಂದ ಮಗನನ್ನು ತಂದೆ, ತಾಯಿ, ಅತ್ತಿಗೆ, ಅಣ್ಣ, ಸಂಬಂಧಿಕರು ಆರತಿ ಮಾಡಿ ಮನೆಗೆ ಬರಮಾಡಿಕೊಂಡರು. ಬಿಗ್ ಬಾಸ್ 11ರ ವಿನ್ನರ್ ಹನುಮಂತ ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.