ಬೆಂಗಳೂರು:ಕಳೆದ 32 ಮತ್ತು 29 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಇಬ್ಬರು ದಿನಗೂಲಿ ನೌಕರರ ಸೇವೆಯನ್ನು ಖಾಯಂಗೊಳಿಸದಿರುವುದು ಮಾನವ ಶ್ರಮವನ್ನು ಶೋಷಣೆ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾನದಂಡಗಳಡಿಯಲ್ಲಿ 10 ವರ್ಷಗಳ ಸೇವೆ ಪೂರ್ಣಗೊಳಿಸಿದ ದಿನದಿಂದ ಖಾಯಂಗೊಳಿಸಲು ಆದೇಶ ನೀಡಿದೆ.
ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಉಪವಿಭಾಗದಲ್ಲಿ 39 ವರ್ಷಗಳಿಂದ ಸಾಕ್ಷರ ಸಹಾಯಕರಾಗಿ ಕೆಲಸ ಮಾಡುತ್ತಿರುವ ಆನಂದು (58) ಮತ್ತು ಕಿರಿಯ ಎಂಜಿನಿಯರ್ ಈಶ್ವರ್ (54) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಅರ್ಜಿದಾರರು ಸಲ್ಲಿಸಿದ ಸೇವೆಗಳನ್ನು ಪಿಂಚಣಿ ಮತ್ತು ಇತರ ನಿವೃತ್ತ ಪ್ರಯೋಜನಗಳನ್ನು ನಿರ್ಧರಿಸುವ ಉದ್ದೇಶಕ್ಕಾಗಿ ಪರಿಗಣಿಸಬೇಕು. ಈ ಆದೇಶ ಮುಂದಿನ 12 ವಾರಗಳಲ್ಲಿ ಅನುಷ್ಟಾನಗೊಳಿಸಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಜೊತೆಗೆ, ದಿನಗೂಲಿ ವೇತನಕ್ಕೆ ಕೆಲಸ ಮಾಡುವ ವ್ಯಕ್ತಿಯು ಕಾನೂನು ಹೋರಾಟದ ಹೊರೆ ಹೊರುವ ಸ್ಥಿತಿಯಲ್ಲಿರುವುದಿಲ್ಲ. ಈ ರೀತಿಯ ನೌಕರರು ತಮ್ಮ ಸಮಸ್ಯೆಗಳ ಪರಿಹರಿಸಿಕೊಳ್ಳುವುದಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡುವುದು ಸರಿಯಾದ ಕ್ರಮವಲ್ಲ. ಹೀಗಾಗಿ ದಿನಗೂಲಿ ನೌಕರರನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾನದಂಡಗಳಡಿ ಖಾಯಂಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಪೀಠ ೇಳಿದೆ.
ಸುಪ್ರೀಂ ಕೋರ್ಟ್ ನಿರ್ದೇಶನಗಳ ಪ್ರಕಾರ ಹಲವು ದಿನಗೂಲಿ ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. ಅಧಿಕಾರಿಗಳ ಶಿಫಾರಸು ಮಾಡಿದ ನಂತರವೂ ಇಬ್ಬರೂ ಅರ್ಜಿದಾರರ ಸೇವೆಯನ್ನು ಯಾವ ಕಾರಣಕ್ಕಾಗಿ ಖಾಯಂಗೊಳಿಸಲಾಗಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದು ಪೀಠ ಅಚ್ಚರಿ ವ್ಯಕ್ತಪಡಿಸಿದೆ. ಅರ್ಜಿದಾರರು ತಮ್ಮ ಪ್ರಾರಂಭದಿಂದ ಸರ್ಕಾರದಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದ್ದಾರೆ. ಇಂದಿಗೂ ಮುಂದುವರೆಸುತ್ತಿದ್ದು, ಸೇವೆಯ ಕೊನೆಯ ಹಂತದಲ್ಲಿದ್ದಾರೆ. ಈಗಲೂ ಅವರ ಸೇವೆ ಖಾಯಂಗೊಳಿಸಲು ಆದೇಶ ನೀಡಿದಿದ್ದರೆ ಮುಂದೊಂದು ದಿನ ಜೀವನೋಪಾಯಕ್ಕಾಗಿ ಅಲೆದಾಡಬೇಕಾಗುತ್ತದೆ. ಮಾನವ ಶ್ರಮವನ್ನು ಶೋಷಣೆ ಮಾಡಿದಂತಾಗಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ:ಅರ್ಜಿದಾರ ಆನಂದು ಎಂಬವರು ಪಂಚಾಯತ್ ರಾಜ್ ಇಲಾಖೆಯಲ್ಲಿ ವಿಶೇಷ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಾಕ್ಷರ ಸಹಾಯಕರಾಗಿ 1986ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತೊಬ್ಬ ಅರ್ಜಿದಾರ ಈಶ್ವರ್ 1993ರಿಂದ ಜೂನಿಯರ್ ಎಂಜಿನಿಯರ್ ಆಗಿ ಅದೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 10 ವರ್ಷಗಳ ಬಳಿಕ ಇಬ್ಬರೂ ಅರ್ಜಿದಾರರನ್ನು ಖಾಯಂ ಗೊಳಿಸಬೇಕು ಎಂದು ಹಿರಿಯ ಅಧಿಕಾರಿಗಳು ಶಿಫಾರಸು ಮಾಡಿದ್ದರೂ, ಇಲಾಖೆ ಕ್ರಮಕ್ಕೆ ಮುಂದಾಗಿರಲಿಲ್ಲ. ಹೀಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಕೇಂದ್ರ ನೇಮಕಾತಿಗಳಿಂದ ನ್ಯಾ.ದೇಸಾಯಿ 'ಡಿಬಾರ್' ಆದೇಶ ರದ್ದುಪಡಿಸಿದ ಹೈಕೋರ್ಟ್
ಇದನ್ನೂ ಓದಿ:ಶಾಸಕರು, ಎಂಎಲ್ಸಿಗಳಿಗೆ ಸಂಪುಟ ದರ್ಜೆ ಸ್ಥಾನಮಾನ: ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್