ಬೆಂಗಳೂರು: ಉದ್ಯೋಗಿಗಳಿಗೆ ಕನಿಷ್ಠ ವೇತನ ನಿಗದಿಪಡಿಸುವ ಸಂದರ್ಭದಲ್ಲಿ ಉದ್ಯೋಗದಾತರ ಅಭಿಪ್ರಾಯವನ್ನು ಸರ್ಕಾರ ಕೇಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್ ಮತ್ತಿತರರು ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಕನಿಷ್ಠ ವೇತನ ನಿಗದಿ ಕುರಿತ ವಿಚಾರದ ಬಗ್ಗೆ ಹೊಸದಾಗಿ ವಿಚಾರಣೆ ನಡೆಸಿ 10 ವಾರಗಳಲ್ಲಿ ತೀರ್ಪು ನೀಡುವಂತೆ ಪ್ರಕರಣವನ್ನು ಮತ್ತೆ ಏಕ ಸದಸ್ಯ ಪೀಠಕ್ಕೆ ಹೈಕೋರ್ಟ್ ವಿಭಾಗೀಯ ಪೀಠವು ಹಸ್ತಾಂತರಿಸಿದೆ.
ಮೇಲ್ಮನವಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಾಲಯ, ಪ್ರಕರಣವನ್ನು ಮತ್ತೆ ಏಕ ಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಿ, ಕಾನೂನು ಪ್ರಕಾರ ಹೊಸದಾಗಿ ವಿಚಾರಣೆ ನಡೆಸಿ ತೀರ್ಪು ನೀಡಬೇಕು. ಇಡೀ ಪ್ರಕ್ರಿಯೆ 10 ವಾರಗಳಲ್ಲಿಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದೆ.
ಜೊತೆಗೆ, ಉದ್ಯೋಗಿಗಳಿಗೆ ಕನಿಷ್ಠ ವೇತನ ಪಾವತಿ ಅಥವಾ ನಿಗದಿಯಲ್ಲಿ ಉದ್ಯೋಗದಾತರು ಪ್ರಮುಖ ಬಾಧ್ಯಸ್ಥರು. ಏಕೆಂದರೆ ಇಡೀ ಪ್ರಕ್ರಿಯೆಯಿಂದ ಹೊರೆಯಾಗುವುದು ಅವರಿಗೆ, ಹಾಗಾಗಿ ವೇತನ ನಿಗದಿ ಅಥವಾ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸರ್ಕಾರ ಯಾವುದೇ ಅಧಿಸೂಚನೆ ಹೊರಡಿಸುವ ಮುನ್ನ ಉದ್ಯೋಗದಾತರ ಅಹವಾಲು ಕೇಳಬೇಕು ಎಂದು ತಿಳಿಸಿದೆ.
ಕನಿಷ್ಠ ವೇತನ ನಿಗದಿ ವಿಚಾರ ಬಂದಾಗ ಹಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಅಂತಿಮವಾಗಿ ಸರ್ಕಾರ ಎಲ್ಲಾ ಅಂಶಗಳು, ಪರಿಸ್ಥಿತಿಗಳು ಹಾಗೂ ಸ್ಥಿತಿಗತಿಗಳನ್ನು ಅರಿತು ನಿಗದಿ ಮಾಡಬೇಕು. ಹಾಗೆ ಮಾಡುವಾಗ ಸರ್ಕಾರ ಉದ್ಯೋಗದಾತರ ಅಭಿಪ್ರಾಯ, ಅನಿಸಿಕೆಯನ್ನೂ ಸಹ ಪರಿಗಣಿಸಬೇಕಾಗುತ್ತದೆ ಎಂದು ಪೀಠ ಹೇಳಿದೆ.
ಏಕ ಸದಸ್ಯ ಪೀಠ ಮೇಲ್ಮನವಿದಾರರನ್ನು ಪ್ರತಿವಾದಿಗಳನ್ನಾಗಿಸಿ ವಾದ ಆಲಿಸಬೇಕಾಗಿತ್ತು. ಅದು ಆಗಿಲ್ಲ. ಆಡಳಿತಾತ್ಮಕ, ಅರೆ ನ್ಯಾಯಿಕ, ನ್ಯಾಯಿಕ ಅಥವಾ ಶಾಸನಾತ್ಮಕ ಪ್ರಕ್ರಿಯೆ ಕೈಗೊಂಡರೂ ಸಹ ನಿರ್ಧಾರಗಳಿಂದ ಬಾಧಿತವಾಗುವುದು ಉದ್ಯೋಗದಾತರೇ. ಹಾಗಾಗಿ ಅವರಿಗೆ ತಮ್ಮ ಅನಿಸಿಕೆ ಕೇಳಿಲ್ಲವೆಂದು ಪ್ರಶ್ನಿಸುವ ಹಕ್ಕಿದೆ. ಅದು ಸ್ವಾಭಾವಿಕ ನ್ಯಾಯವೂ ಆಗಿರಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ:2022ರ ಜು.28ರಂದು ಸರ್ಕಾರ ಕನಿಷ್ಠ ವೇತನ ನಿಗದಿ ಕಾಯಿದೆ 1948, ಸೆಕ್ಷನ್ 3(1)(ಬಿ) ಮತ್ತು ಸೆಕ್ಷನ್ 5(1)(ಬಿ)ಅನ್ವಯ ಯಂತ್ರೋಪಕರಣ ಸಹಿತ ಮತ್ತು ರಹಿತರಾಗಿ ಫೌಂಡ್ರಿಯಲ್ಲಿ ಕೆಲಸ ಮಾಡುವವರಿಗೆ ಕನಿಷ್ಠ ವೇತನ ನಿಗದಿ ಮಾಡಿ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್, ಕರ್ನಾಟಕ ರಾಜ್ಯ ಸಮಿತಿ ಮತ್ತು ಎಂಜಿನಿಯರಿಂಗ್ ಅಂಡ್ ಜನರಲ್ ವರ್ಕರ್ಸ್ ಯೂನಿಯನ್ ಮತ್ತಿತರ ಕಾರ್ಮಿಕ ಸಂಘಟನೆಗಳು ಏಕ ಸದಸ್ಯ ಪೀಠದ ಮೊರೆ ಹೋಗಿದ್ದವು.
ಅರ್ಜಿಯ ವಾದ ಆಲಿಸಿದ್ದ ಏಕ ಸದಸ್ಯ ಪೀಠ, ಸರ್ಕಾರದ ಆದೇಶ ರದ್ದುಗೊಳಿಸಿ ಹೊಸದಾಗಿ ನಿಗದಿಗೊಳಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಉದ್ಯೋಗದಾತ ಸಂಸ್ಥೆಗಳ ಪರ ಮೇಲ್ಮನವಿ ಸಲ್ಲಿಸಿದ್ದ ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್, ಏಕ ಸದಸ್ಯ ಪೀಠದ ಮುಂದೆ ತಮ್ಮನ್ನು ಪ್ರತಿವಾದಿ ಮಾಡಿಲ್ಲ, ಜತೆಗೆ ಸರ್ಕಾರ ವೇತನ ನಿಗದಿ ಮಾಡುವಾಗ ತಮ್ಮ ಅಭಿಪ್ರಾಯ ಆಲಿಸಿಲ್ಲ ಎಂದು ಆಕ್ಷೇಪಿಸಿದ್ದರು.
ಇದನ್ನೂ ಓದಿ: ಪಿಟಿಸಿಎಲ್ ಕಾಯ್ದೆಯಡಿ ಮಂಜೂರಾದ ಜಮೀನು ಮಾರಿ 12 ವರ್ಷದ ಬಳಿಕ ಹಕ್ಕು ಮರುಸ್ಥಾಪನೆಗೆ ಕೋರಿದ್ದ ಅರ್ಜಿ ವಜಾ