ಕರ್ನಾಟಕ

karnataka

ETV Bharat / state

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರು ಸಾವು: ತನಿಖಾ ತಂಡ ರಚಿಸಿದ ಸರ್ಕಾರ, ಶಾಸಕರು ಹೇಳಿದ್ದಿಷ್ಟು! - 3 DEATH IN HOSPITAL

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಎರಡು ದಿನಗಳಲ್ಲಿ ಮೂವರು ಬಾಣಂತಿಯರು ಮೃತಪಟ್ಟಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರ ತನಿಖಾ ತಂಡ ರಚಿಸಿದೆ.

district hospital
ಬಳ್ಳಾರಿ ಜಿಲ್ಲಾಸ್ಪತ್ರೆ (ETV Bharat)

By ETV Bharat Karnataka Team

Published : Nov 15, 2024, 8:54 PM IST

Updated : Nov 15, 2024, 9:58 PM IST

ಬಳ್ಳಾರಿ :ನಗರದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಎರಡು ದಿನಗಳಲ್ಲಿ ಮೂವರು ಬಾಣಂತಿಯರು ಮೃತಪಟ್ಟ ವರದಿಯಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರವು ಮೂವರು ವೈದ್ಯರ ತನಿಖಾ ತಂಡ ರಚಿಸಿ ಆದೇಶಿಸಿದೆ.

ಹೆರಿಗೆಗೆ ದಾಖಲಾಗಿ, ಸಿಸೇರಿಯನ್‌ಗೆ ಒಳಗಾದ ಬಳಿಕ ಏಕಾಏಕಿ ತೀವ್ರ ಅಸ್ವಸ್ಥಗೊಂಡಿದ್ದ ರೋಜಾ (19) ಎಂಬುವವರು ಗುರುವಾರ ಕೊನೆಯುಸಿರೆಳೆದಿದ್ದಾರೆ. ಇದಕ್ಕೂ ಹಿಂದಿನ ದಿನ ನಂದಿನಿ ಮತ್ತು ಲಲಿತಮ್ಮ ಎಂಬವರು ಮೃತರಾಗಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ ಬಸರೆಡ್ಡಿ ಅವರು ಮಾತನಾಡಿದರು (ETV Bharat)

ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಸಿ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ಭಾಸ್ಕರ್ ಬಿ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಹರ್ಷ ಟಿ. ಆರ್​ ಅವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿದೆ.

ಇವರು ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಹೆರಿಗೆ ವೇಳೆ ಸಾವಿಗೆ ಕಾರಣವೇನು? ಎಂಬುದರ ಬಗ್ಗೆ ತನಿಖಾ ವರದಿಯನ್ನು ಜರೂರಾಗಿ ಸಲ್ಲಿಸಬೇಕು ಎಂದು ವಿಶ್ವವಿದ್ಯಾಲಯದ ಕುಲ ಸಚಿವರು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಜಿಲ್ಲಾ ಶಸ್ತ್ರ ಚಿಕಿತ್ಸಕ ಎನ್. ಬಸರೆಡ್ಡಿ ಪ್ರತಿಕ್ರಿಯಿಸಿದ್ದು, ''ಎರಡು ದಿವಸ ಎರಡು ಡೆತ್​ಗಳಾಗಿವೆ. ನಂತರ ಮತ್ತೊಂದು ಡೆತ್ ಆಗಿದೆ. ಬೇರೆ ಬೇರೆ ಡಾಕ್ಟರ್​ಗಳು ಇದ್ದರು. ಒಂದೇ ದಿವಸ ಒಬ್ಬೊಬ್ಬರು ಡ್ಯೂಟಿ ಡಾಕ್ಟರ್​ಗಳು ಇರುತ್ತಾರೆ. ಮೂರು ನಾಲ್ಕು ಡಾಕ್ಟರ್​ಗಳಲ್ಲಿ ಒಂದೊಂದು ಡೆತ್​ಗೆ ಒಬ್ಬೊಬ್ಬರು ಡಾಕ್ಟರ್ಸ್​ಗಳು ಇದ್ದಾರೆ. ಎರಡು ಕೇಸ್​ ಡೆತ್​ ಆಗಿದ್ದು, ಈಗಾಗಲೇ ಪ್ರಿ ಎಕ್ಸಿಸ್ಟಿಂಗ್ ಪ್ರಾಬ್ಲಂ ಇತ್ತು. ಆದರೂ ನಮ್ಮ ಪ್ರಯತ್ನ ಮಾಡಿದ್ದೇವೆ. ಅವರಿಗೆ ತಿಳಿಸುವುದನ್ನ ತಿಳಿಸಿ ಇದರ ರಿಸ್ಕ್​ ಬಗ್ಗೆ ಹೇಳಿ ಚಿಕಿತ್ಸೆ ಮಾಡಿದ್ದೇವೆ. ಎರಡು ಮಕ್ಕಳು ಚೆನ್ನಾಗಿದ್ದಾರೆ'' ಎಂದರು.

''ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ರಿಪೋರ್ಟ್​ ಬರಬೇಕಿದೆ. 70 ಆಪರೇಷನ್​ಗಳನ್ನು​ ಮಾಡಿದ್ದೇವೆ. ಬೇರೆಯವರೆಲ್ಲ ಚೆನ್ನಾಗಿದ್ದಾರೆ. ಇದರಿಂದಲೇ ಹೀಗೆ ಆಗಿದೆ ಅಂತ ನಾವು ಹೇಳಲಾಗುವುದಿಲ್ಲ. ತನಿಖೆಯ ನಂತರ ರಿಪೋರ್ಟ್​ ಬಂದ ಮೇಲೆ ಕನ್ಫರ್ಮ್​ ಆಗುತ್ತೆ'' ಎಂದು ತಿಳಿಸಿದರು.

ಘಟನೆ ಬಗ್ಗೆ ಶಾಸಕರು ಹೇಳಿದ್ದಿಷ್ಟು:ಈ ಬಗ್ಗೆ ಶಾಸಕ ನಾರಾಭರತ್ ರೆಡ್ಡಿಯವರು ಮಾತನಾಡಿ, ಈ ರೀತಿ ಘಟನೆಯಾಗಿದೆ ಎಂಬುದನ್ನ ನನಗೆ ತಿಳಿಸಲಿಲ್ಲ, ನಾನೇ ಖುದ್ದಾಗಿ ಫೋನ್ ಮಾಡಿದಾಗ ಇಲ್ಲ ಸರ್ ಈ ರೀತಿ ಇನ್ಸಿಡೆಂಟ್ ಆಗಿದೆ, ಅದರಲ್ಲಿ ಒಬ್ಬರಿಗೆ ಪ್ಲೇಟ್​ಲೆಟ್ಸ್​ ಕಡಿಮೆಯಾಗಿದೆ ಅದರಿಂದ ಏನೋ ತೊಂದರೆಯಾಗಿದೆ ಎಂದರು. ನಾನು ಆಗ ಊರಲ್ಲಿ ಇರಲಿಲ್ಲ, ಬಂದು ಪರಿಶೀಲಿಸುತ್ತೇನೆ ಎಂದಾಗ, ಇಲ್ಲ ಸರ್ ನಾವು ಈಗಾಗಲೇ ಒಂದು ಏಳು ಜನರನ್ನ ವಿಮ್ಸ್​ಗೆ ಶಿಫ್ಟ್​ ಮಾಡಿದ್ದೇವೆ, ಅಲ್ಲಿ ಟ್ರೀಟ್​ಮೆಂಟ್ ಮಾಡುತ್ತಿದ್ದಾರೆ ಎಂದರು. ನನಗೆ ಅವರು ಮಾತನಾಡುವ ರೀತಿಯಲ್ಲಿಯೇ ಸ್ಪಷ್ಟತೆ ಇರಲಿಲ್ಲ. ಅದಕ್ಕೋಸ್ಕರವೇ ಚೆಕ್​ ಮಾಡುವುದಕ್ಕಾಗಿ ನಾನು ವಿಮ್ಸ್​ಗೆ ಬಂದೆ ಎಂದರು.

ಶಾಸಕ ನಾರಾಭರತ್ ರೆಡ್ಡಿ ಮಾತನಾಡಿದರು (ETV Bharat)

ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ: ಬಹಳಷ್ಟು ಜನ ಸರ್​ ನಮಗೆ ಟಾಬ್ಲೆಟ್ಸ್​ ಹೊರಗಡೆ ಬರೆದುಕೊಡುತ್ತಾರೆ, ಟೆಸ್ಟ್​ಗಳನ್ನ ಹೊರಗಡೆ ಬರೆದುಕೊಡುತ್ತಾರೆ, ಊಟ ಟೈಮ್​ಗೆ ಕೊಡಲ್ಲ ಎಂದಿದ್ದರು. ನಾನು ಸರಿಹೋಗುತ್ತಾರೆ ಎಂದುಕೊಂಡಿದ್ದೆ. ಇವತ್ತು ನಾನು ಬೆಳಗ್ಗೆ ಬಂದಾಗ ಪ್ರತಿಯೊಂದು ರೋಗಿಯು ಯಾವುದೋ ಒಂದು ಟಾಬ್ಲೆಟ್​ ಹೊರಗಡೆ ತೆಗೆದುಕೊಳ್ಳುತ್ತಿದ್ದರು. ಈ ಬಗ್ಗೆ ಡಾಕ್ಟರ್​ಗಳನ್ನ ಕೇಳಿದ್ರೆ, ಇಲ್ಲ ಸರ್ ನಾವು ಬರೆದಿರುತ್ತೇವೆ, ಅವರು ಹೊರಗಡೆ ಹೋಗಿ ತೆಗೆದುಕೊಂಡು ಬಂದ್ರೆ ನಾವೇನು ಮಾಡೋಕಾಗುತ್ತೆ ಎನ್ನುತ್ತಿದ್ದಾರೆ. ಈ ಬಗ್ಗೆ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಹೇಳಿದರು.

ಬಿಮ್ಸ್​ ನಿರ್ದೇಶಕರ ಸ್ಪಷ್ಟನೆ ಹೀಗಿದೆ:ಈ ಕುರಿತು ಬಿಮ್ಸ್ ನಿರ್ದೇಶಕ ಡಾ. ಗಂಗಾಧರ್ ಗೌಡ ಅವರು ಮಾತನಾಡಿ, ಸ್ಥಳೀಯ ಆಸ್ಪತ್ರೆಯಿಂದ ನಮ್ಮ ಆಸ್ಪತ್ರೆಗೆ ಸುಮಾರು 7 ಜನ ಸಿಸೇರಿಯನ್ ನಂತರ ಸೋಂಕು ತಗುಲಿ ಅಡ್ಮೆಂಟ್ ಮಾಡಿದ್ದಾರೆ. ಅದರಲ್ಲಿ ಒಬ್ಬರು ರೋಜಮ್ಮ ಎಂಬುವವರು ನಿನ್ನೆ ರಾತ್ರಿ 2:30 ರ ಸಮಯದಲ್ಲಿ ತೀರಿಕೊಂಡಿದ್ದಾರೆ. ಅವರು ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿದ್ದರು. ಅವರಿಗೆ ವೆಂಟಿಲೇಟರ್ ಸಪೋರ್ಟ್​ನಿಂದ ಚಿಕಿತ್ಸೆ ನೀಡಿದೆವು. ಆದರೂ ಅವರನ್ನ ಉಳಿಸಿಕೊಳ್ಳಲು ಆಗಲಿಲ್ಲ ಎಂದರು.

ಇಬ್ಬರನ್ನ ಇವತ್ತು ಡಿಸ್ಚಾರ್ಜ್​ ಮಾಡುತ್ತೇವೆ: ಇನ್ನೊಬ್ಬರು ಸುಮಯ್ಯ ಎಂಬುವವರು ಆರ್​ಐಸಿ ಘಟಕದಲ್ಲಿ ಇದ್ದಾರೆ. ಅವರು ಕ್ರಿಟಿಕಲ್ ಇದ್ದಾರೆ. ಅವರಿಗೆ ಎರಡು ಬಾರಿ ಡಯಾಲಿಸಿಸ್ ಮಾಡಿದ ಮೇಲೆ ಅವರು ಮೂತ್ರ ಮಾಡುತ್ತಿದ್ದಾರೆ. ಮುಸ್ಕಾನ್ ಎಂಬುವವರು ಬೇರೆ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡಿದ್ದಾರೆ. ಇಬ್ಬರನ್ನ ಇವತ್ತು ಡಿಸ್ಚಾರ್ಜ್​ ಮಾಡುತ್ತೇವೆ, ಇನ್ನಿಬ್ಬರನ್ನ ಡಿಸ್ಚಾರ್ಜ್​ ಮಾಡಲು ಕಾಲಾವಕಾಶ ಬೇಕಾಗುತ್ತೆ. ನಮ್ಮಲ್ಲಿ ಬಂದಿರುವ 7 ಪೇಶೆಂಟ್​ನಲ್ಲಿ ಒಬ್ಬರು ಡೆತ್ ಆಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ :ವಿಮ್ಸ್ ರಕ್ತನಿಧಿಯಲ್ಲಿ ಅಗ್ನಿ ಅವಘಡ: ಸಚಿವ ಬಿ.ಶ್ರೀರಾಮುಲು, ಜಿಲ್ಲಾಧಿಕಾರಿ ಭೇಟಿ

Last Updated : Nov 15, 2024, 9:58 PM IST

ABOUT THE AUTHOR

...view details