ಬೆಂಗಳೂರು:ಜಾತಿ ಜನಗಣತಿ ಬಗ್ಗೆ ಬಿಜೆಪಿಯಿಂದ ಯಾವ ತಕರಾರು, ವಿರೋಧ ಇಲ್ಲ. ಅದರ ಅನುಷ್ಠಾನಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ ಎಂಬ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರ ಹೇಳಿಕೆಯನ್ನು ಓದಿ ಮನಸ್ಸು ನಿರಾಳವಾಯಿತು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ಅಶೋಕ್ ಅವರೇ ನಮ್ಮ ಪಕ್ಷದೊಳಗಿನ ತಕರಾರುಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ, ಅವುಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ನೀವು ನುಡಿದಂತೆ ನಡೆದರೆ ಜಾತಿ ಜನಗಣತಿ ಜಾರಿಯಾಗಿ ನೀವೇ ಹೇಳಿಕೊಂಡಿರುವ ನಿಮ್ಮ ಪಕ್ಷದ ಕನಸಿನ 'ಅಂತ್ಯೋದಯ' ಸಾಕಾರಗೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ. ನೀವು ಮಾತ್ರ, ಕೊಟ್ಟ ಮಾತಿಗೆ ತಪ್ಪಿ ನಡೆಯಬಾರದು ಅಷ್ಟೇ. 2018ರಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದರೂ ಅಂಕಿಅಂಶಗಳ ಪರಿಶೀಲನಾ ಕಾರ್ಯ ಪೂರ್ಣಗೊಳ್ಳದೇ ಇದ್ದ ಕಾರಣ ಆ ಅವಧಿಯಲ್ಲಿ ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಬೇರೆ ಯಾವ ಕಾರಣಗಳೂ ಇರಲಿಲ್ಲ. ಈಗ ವರದಿ ಬಿಡುಗಡೆಗೆ ಸಿದ್ಧವಾಗಿದೆ. ಅದನ್ನು ಅಂಗೀಕರಿಸಲು ನಮ್ಮ ಪಕ್ಷ ಮತ್ತು ಸರ್ಕಾರ ಕೂಡಾ ಬದ್ಧವಾಗಿದೆ' ಎಂದಿದ್ದಾರೆ.
'ನಮ್ಮ ಪಕ್ಷದ ಎಲ್ಲ ನಾಯಕರು ತಾತ್ವಿಕವಾಗಿ ಜಾತಿಗಣತಿಯನ್ನು ಒಪ್ಪಿಕೊಂಡಿದ್ದಾರೆ. ಯಾರ ವಿರೋಧವೂ ಇಲ್ಲ. ವಿರೋಧ ಪಕ್ಷಗಳ ಸುಳ್ಳು ಪ್ರಚಾರದಿಂದಾಗಿ ಕೆಲವರಲ್ಲಿ ನಿರಾಧಾರವಾದ ಸಂಶಯಗಳು ಹುಟ್ಟಿಕೊಂಡಿವೆ, ಇನ್ನು ಕೆಲವರಲ್ಲಿ ತಪ್ಪು ಅಭಿಪ್ರಾಯಗಳಿಂದಾಗಿ ಗೊಂದಲಗಳಿವೆ. ಮಠಾಧೀಶರು ಸೇರಿದಂತೆ ಎಲ್ಲರ ಅನುಮಾನ-ಸಂಶಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಂಡು ಜಾತಿ ಗಣತಿ ವರದಿಯನ್ನು ಜಾರಿಗೆ ತರುವ ನಿರ್ಧಾರವನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು. ಕಾಂತರಾಜ್ ಆಯೋಗ ನಡೆಸಿದ್ದ ಜಾತಿಗಣತಿಯ ವರದಿ ಇಲ್ಲಿಯ ವರೆಗೆ ಬಿಡುಗಡೆಯಾಗಿಲ್ಲ. ನಾನು ಕೂಡಾ ಅದನ್ನು ಓದಿಲ್ಲ. ಹೀಗಿರುವಾಗ ಆರ್.ಅಶೋಕ್ ಅವರು ವರದಿ ಬಿಡುಗಡೆಯಾಗುವ ಮೊದಲೇ ಅದು ವೈಜ್ಞಾನಿಕವಾಗಿ ನಡೆದಿಲ್ಲ, ಅದರಲ್ಲಿ ತಪ್ಪುಗಳಿವೆ ಎಂದು ಆರೋಪಿಸುತ್ತಿದ್ದಾರೆ. ವರದಿ ಅವರಲ್ಲಿದೆಯೇ? ಯಾವ ಆಧಾರದಲ್ಲಿ ಅವರು ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು' ಎಂದು ತಿಳಿಸಿದ್ದಾರೆ.
'ಈಗ ಏಕಾಏಕಿಯಾಗಿ ವರದಿಯನ್ನು ಬಿಡುಗಡೆಗೊಳಿಸುವುದು ದಿಡೀರ್ ನಿರ್ಧಾರ ಅಲ್ಲ, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ಇದರ ಬಗ್ಗೆ ಸಮಾಲೋಚನೆ ನಡೆಸುತ್ತಾ ಬಂದಿದ್ದೇವೆ. ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳ್ಳವರು, ಯಾವುದೇ ಚರ್ಚೆ-ಸಂವಾದ ಇಲ್ಲದೆ ದಿಢೀರ್ ನಿರ್ಧಾರ ಕೈಗೊಳ್ಳುವ ಸರ್ವಾಧಿಕಾರಿ ಧೋರಣೆ ನಮ್ಮದ್ದಲ್ಲ. ಸಾರ್ವಜನಿಕ ತೀರ್ಮಾನಗಳನ್ನು ಸಹಮತ ಮೂಡಿಸುವ ಮೂಲಕ ಕೈಗೊಳ್ಳಬೇಕೆಂಬ ಅಭಿಪ್ರಾಯ ನಮ್ಮದಾಗಿದೆ. ಇದರಿಂದಾಗಿ ಸ್ವಲ್ಪ ವಿಳಂಬವಾಗಿದೆ ಅಷ್ಟೇ' ಎಂದು ಉಲ್ಲೇಖಿಸಿದ್ದಾರೆ.