ಬೆಂಗಳೂರು:ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಡ್ವೊಕೇಟ್ ಜನರಲ್ಗೆ ಸೂಚನೆ ನೀಡಿದ್ದಾರೆ.
ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದ ಟಿ.ಜೆ. ಅಬ್ರಹಾಂ:ವಸತಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ಮುಡಾ ಪ್ರಕರಣ ಸಂಬಂಧ ಹೈಕೋರ್ಟ್ ತೀರ್ಪಿನ ವಿರುದ್ಧ ಹೇಳಿಕೆ ನೀಡಿದ್ದಾರೆ, ಅವರ ಮೇಲೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಟಿ. ಜೆ. ಅಬ್ರಹಾಂ ರಾಜ್ಯಪಾಲರಿಗೆ ಅ.21ಕ್ಕೆ ಮನವಿ ಸಲ್ಲಿಸಿದ್ದರು. ತಾವು ಸಲ್ಲಿಸಿರುವ ದೂರಿನ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಅಡ್ವೊಕೇಟ್ ಜನರಲ್ ಅವರಿಗೆ ನಿರ್ದೇಶನ ನೀಡುವಂತೆ ಟಿ.ಜೆ. ಅಬ್ರಹಾಂ ರಾಜ್ಯಪಾಲರಿಗೆ ಮನವಿ ಮಾಡಿದ್ದರು.
ಕ್ರಮ ಕೈಗೊಳ್ಳಲು ರಾಜ್ಯಪಾಲರ ಸೂಚನೆ: ಈ ಸಂಬಂಧ ಇದೀಗ ರಾಜ್ಯಪಾಲರು ಎಜಿಗೆ ಪತ್ರ ಬರೆದು ನಿಯಮದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಪತ್ರದಲ್ಲಿ ಸಚಿವ ಜಮೀರ್ ಖಾನ್ ಹೈಕೋರ್ಟ್ ತೀರ್ಪಿನ ವಿರುದ್ಧ ಗಂಭೀರ ಆರೋಪ ಮಾಡಿ ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನಿಸಿದ್ದಾರೆ ಎಂದು ದೂರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ದೂರು ನೀಡಿದ್ದಾರೆ. ಈ ಸಂಬಂಧ ನಿಯಮದ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸುವಂತೆ ರಾಜ್ಯಪಾಲರಿಂದ ನಿರ್ದೇಶಿತನಾಗಿದ್ದೇನೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ತಿಳಿಸಿದ್ದಾರೆ.