ಬೆಂಗಳೂರು: ಕೇಂದ್ರ ಗುಪ್ತಚರ ಇಲಾಖೆಯ ಸೂಚನೆಯ ಮೇರೆಗೆ ರಾಜ್ಯಪಾಲರು ಆಗಸ್ಟ್ 29ರ ವರೆಗಿನ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಅದರಂತೆ, ಇಂದು ನಡೆದ ನೃಪತುಂಗ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ಕಾರ್ಯಕ್ರಮಕ್ಕೂ ಗೈರಾದರು.
ಅರಮನೆ ರಸ್ತೆಯ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣ ನಡೆದ ನೃಪತುಂಗ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಗಮಿಸಲಿಲ್ಲ. ರಾಜ್ಯಪಾಲರು ಪಾಲ್ಗೊಳ್ಳಬೇಕಿದ್ದ ಮೊದಲ ಕಾರ್ಯಕ್ರಮವೇ ಘಟಿಕೋತ್ಸವ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ, ಸಾರ್ವಜನಿಕ ಕಾರ್ಯಕ್ರಮದಿಂದ ದೂರವಿರುವಂತೆ ಕೇಂದ್ರ ಗುಪ್ತಚರ ಇಲಾಖೆಯಿಂದ ಬಂದ ಸೂಚನೆಯನುಸಾರ ಕೊನೆ ಕ್ಷಣದಲ್ಲಿ ಕಾರ್ಯಕ್ರಮದದಲ್ಲಿ ಪಾಲ್ಗೊಳ್ಳುವ ನಿರ್ಧಾರವನ್ನು ಅವರು ಬದಲಿಸಿದ್ದಾರೆ. ಸಮ ಕುಲಾಧಿಪತಿಯಾಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ಸಮಾರಂಭ ನಡೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇದರ ಬೆನ್ನಲ್ಲೇ ಗುಪ್ತಚರ ಇಲಾಖೆ ರಾಜ್ಯಪಾಲರಿಗೆ Z ಕೆಟಗರಿ ಭದ್ರತೆ ನೀಡಿದೆ. ಅದರಂತೆ ರಾಜ್ಯಪಾಲರು ಬುಲೆಟ್ ಪ್ರೂಫ್ ಕಾರು ತರಿಸಿಕೊಂಡಿದ್ದಾರೆ. ಆಗಸ್ಟ್ 29ರವರೆಗೆ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನೂ ಅವರು ಮುಂದೂಡಿದ್ದಾರೆ.
ಸದ್ಯ ರಾಜಭವನಕ್ಕೆ ಗಣ್ಯರ ಭೇಟಿಗೂ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಅಗತ್ಯತೆ ನೋಡಿಕೊಂಡು ಭೇಟಿಗೆ ಅವಕಾಶ ನೀಡುವ ನಿರ್ದೇಶನವನ್ನು ರಾಜಭವನದ ಅಧಿಕಾರಿಗಳಿಗೆ ನೀಡಿದ್ದಾರೆ. ಕೇವಲ ರಾಜಭವನ ಕಾರ್ಯಕ್ರಮ, ರಾಜಭವನದಲ್ಲಿ ಕರ್ತವ್ಯ ನಿರ್ವಹಣೆಗೆ ಸೀಮಿತಗೊಳಿಸಿ ತಮ್ಮ ಕಾರ್ಯಕ್ರಮಗಳನ್ನು ಪುನರ್‌ಪರಿಷ್ಕರಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಪ್ರಾಸಿಕ್ಯೂಷನ್ ಅನುಮತಿ: ಎಚ್ಚರಿಕೆ ನಡೆ ಅನುಸರಿಸಿದ ರಾಜ್ಯಪಾಲರು, ಬುಲೆಟ್ ಪ್ರೂಫ್ ಕಾರು ಬಳಕೆ - Z Security to Governor