ಬೆಂಗಳೂರು:ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಡುವಿನ ತಿಕ್ಕಾಟದ ಮಧ್ಯೆ, ವಾಪಸ್ ಕಳುಹಿಸಿದ್ದ ಐದರ ಪೈಕಿ ಮೂರು ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇನ್ನೂ 2 ಮಸೂದೆಗಳನ್ನು ತಮ್ಮಲ್ಲೇ ಬಾಕಿ ಉಳಿಸಿಕೊಂಡಿದ್ದಾರೆ.
ರಾಜ್ಯ ಸರ್ಕಾರ ಒಟ್ಟು 11 ಮಸೂದೆಗಳಿಗೆ ಅಂಕಿತ ಕೋರಿ ರಾಜ್ಯಪಾಲರಿಗೆ ಕಳುಹಿಸಿತ್ತು. ಆದರೆ, ಎಲ್ಲವನ್ನೂ ರಾಜ್ಯಪಾಲರು ಹೆಚ್ಚಿನ ವಿವರಣೆ ಕೋರಿ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಈ ಪೈಕಿ ಐದು ಮಸೂದೆಗಳನ್ನು ಮರುಪರಿಶೀಲಿಸಿ, ಹೆಚ್ಚಿನ ವಿವರಣೆಗಳನ್ನು ಲಗತ್ತಿಸಿ ಮತ್ತೆ ರಾಜಭವನಕ್ಕೆ ರವಾನಿಸಲಾಗಿತ್ತು. ಅದರಲ್ಲಿ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ-2023, ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ-2024, ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2024 ಮಸೂದೆಗಳಿಗೆ ರಾಜ್ಯಪಾಲರು ಅಸ್ತು ಎಂದಿದ್ದಾರೆ.
ರಾಜ್ಯಪಾಲರ ಆಕ್ಷೇಪವೇನಾಗಿತ್ತು?:ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮ ತಡೆಯುವ ಸಲುವಾಗಿ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ-2023ವನ್ನು ವಿಧಾನಮಂಡಲದಲ್ಲಿ ಅಂಗೀಕರಿಸಿ ಡಿ.28, 2023ಕ್ಕೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ರಾಜ್ಯಪಾಲರು ಜ.16 ರಂದು ಹೆಚ್ಚಿನ ಮಾಹಿತಿ ಕೋರಿ ಈ ಬಿಲ್ ಅನ್ನು ಹಿಂತಿರುಗಿಸಿದ್ದರು.
ಈ ವಿಧೇಯಕದ ಕಾರ್ಯ ವ್ಯಾಪ್ತಿಗೆ ಹಲವು ಪ್ರಾಧಿಕಾರಗಳು ಬರುತ್ತವೆ. ಹೀಗಾಗಿ ಸಂಬಂಧಿತ ಪ್ರಾಧಿಕಾರಿಗಳ ಸಲಹೆ, ಅಭಿಪ್ರಾಯ ಕೇಳುವುದು ಅಗತ್ಯ ಎಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಹೇಳಿತ್ತು. ಜೊತೆಗೆ ಸಿಎಂ ಈ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಕಡತ ಸಲ್ಲಿಸಲು ಸೂಚನೆ ನೀಡಿದ್ದರು. ಆದರೆ, ಸಂಬಂಧಿತ ಪ್ರಾಧಿಕಾರಗಳು ಹಾಗೂ ಕಾನೂನು ಇಲಾಖೆಯ ಅಭಿಪ್ರಾಯಗಳು ಕ್ಯಾಬಿನೆಟ್ ನೋಟ್ ನಲ್ಲಾಗಲಿ ಕಡತದಲ್ಲಾಗಲಿ ಲಭ್ಯವಿಲ್ಲ. ಹೀಗಾಗಿ ಕಾನೂನು ಇಲಾಖೆಯ ಅಭಿಪ್ರಾಯ ಮತ್ತು ಸಂಬಂಧಿತ ಪ್ರಾಧಿಕಾರಿಗಳು ನೀಡಿರುವ ಸಲಹೆಗಳ ಮಾಹಿತಿಯನ್ನು ನೀಡುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿದ್ದರು.
ತೆರಿಗೆ ಜಾಲವನ್ನು ವಿಸ್ತರಿಸಲು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಆದಾಯವನ್ನು ಗಳಿಸುವ ಸಲುವಾಗಿ, ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ, 2024 ಅನ್ನು ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು. ಪುರಸಭೆಗಳು ಮತ್ತು ನಗರ ನಿಗಮಗಳು ಪ್ರತಿ ಕಟ್ಟಡ, ಖಾಲಿ ಭೂಮಿ ಅಥವಾ ಎರಡರ ಮೇಲೂ ಆಸ್ತಿ ತೆರಿಗೆ ವಿಧಿಸಲು ಮತ್ತು ಸಂಗ್ರಹಿಸಲು ಅನುವು ಮಾಡಿಕೊಡುವ ಈ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಆಗಸ್ಟ್ 6ಕ್ಕೆ ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ಈ ಮಸೂದೆಯನ್ನು ಆಗಸ್ಟ್ 8ಕ್ಕೆ ಹೆಚ್ಚಿನ ವಿವರಣೆ ಕೇಳಿ ವಾಪಸ್ಸು ಕಳುಹಿಸಿದ್ದಾರೆ. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ನಿಯಮ 2014 ಪ್ರಶ್ನಿಸಿ ಕೋರ್ಟ್ ವಿಚಾರಣೆ ನಡೆಯುತ್ತಿದ್ದು, ಹೀಗಾಗಿ ಮಸೂದೆ ಕಾನೂನು ಬದ್ಧವಾಗುತ್ತೋ ಎಂಬ ಬಗ್ಗೆ ಕಾನೂನು ಅಭಿಪ್ರಾಯ ಲಗತ್ತಿಸುವಂತೆ ರಾಜಭವನ ಸೂಚಿಸಿತ್ತು.