ಕರ್ನಾಟಕ

karnataka

ETV Bharat / state

ಸೆಟ್‌ ಟಾಪ್‌ ಬಾಕ್ಸ್‌ಗಳಿಗೆ ವ್ಯಾಟ್ ನ್ಯಾಯಸಮ್ಮತ ; ಹೈಕೋರ್ಟ್ - HIGH COURT

ಸೆಟ್‌ ಟಾಪ್‌ ಬಾಕ್ಸ್‌ಗಳ ಮೇಲೆ ಮೌಲ್ಯವರ್ಧಿತ ತೆರಿಗೆ ವಿಧಿಸುವುದು ಸಂವಿಧಾನ ಬಾಹಿರ ಎಂಬ ಕೇಬಲ್‌ ಆಪರೇಟರ್‌ಗಳ ವಾದವನ್ನು ತಳ್ಳಿಹಾಕಿರುವ ಹೈಕೋರ್ಟ್‌, ಎಸ್‌ಟಿಬಿಗಳ ಮೇಲೆ ಸರ್ಕಾರ ವಿಧಿಸುವ ಮೌಲ್ಯವರ್ಧಿತ ತೆರಿಗೆ ನ್ಯಾಯಸಮ್ಮತವೆಂದು ತೀರ್ಪು ನೀಡಿದೆ.

HIGH COURT
ಹೈಕೋರ್ಟ್ (ETV Bharat)

By ETV Bharat Karnataka Team

Published : Feb 19, 2025, 4:13 PM IST

ಬೆಂಗಳೂರು :ಸೆಟ್‌ ಟಾಪ್​ ಬಾಕ್ಸ್‌ಗಳ (ಎಸ್‌ಟಿಬಿ) ಮೇಲೆ ಸರ್ಕಾರ ಮೌಲ್ಯವರ್ಧಿತ ತೆರಿಗೆ(ವ್ಯಾಟ್) ವಿಧಿಸುವುದು ನ್ಯಾಯಸಮ್ಮತವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ಎಸ್‌ಟಿಬಿಗಳ ಮೇಲೆ ಮೌಲ್ಯವರ್ಧಿತ ತೆರಿಗೆ ವಿಧಿಸಿದ್ದನ್ನು ಪ್ರಶ್ನಿಸಿ ಮೆಸರ್ಸ್ ಏಟ್ರಿಯಾ ಕನ್ವರ್ಜೆನ್ಸ್ ಟೆಕ್ನಾಲಜೀಸ್ ಲಿಮಿಟೆಡ್ ಕಂಪನಿ ಮತ್ತಿತರರು ಸಲ್ಲಿಸಿದ್ದ ಐದು ಕಂಪನಿಗಳ ಮಾರಾಟ ತೆರಿಗೆ ಪುನಾರಾವಲೋಕನ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ಜಿ. ಬಸವರಾಜ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೇ, ಸೆಟ್ ಟಾಪ್​ ಬಾಕ್ಸ್‌ಗಳಿಗೆ ವ್ಯಾಟ್ ವಿಧಿಸುವುದು ಸಂವಿಧಾನ ಬಾಹಿರ ಎಂಬ ಕೇಬಲ್ ಆಪರೇಟರ್‌ಗಳ ವಾದವನ್ನು ತಳ್ಳಿಹಾಕಿದೆ.

ಒಂದೇ ವ್ಯವಹಾರಕ್ಕೆ ಹಲವು ಮುಖಗಳಿರುತ್ತವೆ. ಒಂದೊಂದು ಮುಖವೂ ಇನ್ನೊಂದರಿಂದ ಭಿನ್ನವಾಗಿರುತ್ತದೆ. ಹೀಗಾಗಿ, ವಿವಿದ ತೆರಿಗೆಗಳನ್ನು ಕೇಂದ್ರ-ರಾಜ್ಯ ಮಾರಾಟದ ಅಡಿಯಲ್ಲಿ ವಿಧಿಸಲಾಗಿರುತ್ತದೆ. ಒಂದೇ ವ್ಯವಹಾರದಲ್ಲಿ ಇವೆರಡೂ ಒಳಗೊಂಡಿರಲು ಸಾಧ್ಯ. ಎಸ್‌ಟಿಬಿ ಕೊಡುವಾಗ ದುಡ್ಡು ಪಡೆಯಲಾಗುತ್ತಿದೆ. ಹೀಗಾಗಿ ಅದು ಮಾರಾಟವೇ ಆಗುತ್ತದೆ. ಅಂದಮೇಲೆ, ರಾಜ್ಯ ಸರ್ಕಾರಕ್ಕೆ ಇದರ ಮೇಲೆ ತೆರಿಗೆ ವಿಧಿಸಲು ಸಂವಿಧಾನದಲ್ಲಿ ಮುಕ್ತ ಅವಕಾಶವಿದೆ ಎಂದು ಪೀಠ ಹೇಳಿದೆ.

ಅಲ್ಲದೆ, ತ್ರಿಪುರಾ ಹೈಕೋರ್ಟ್ ಆದೇಶವೊಂದನ್ನು ಉಲ್ಲೇಖಿಸಿರುವ ಪೀಠ, ಸಂವಿಧಾನಕ್ಕೆ ತರಲಾದ 46ನೇ ತಿದ್ದುಪಡಿಯ ಹಿನ್ನೆಲೆಯಲ್ಲಿ 363ನೇ (29)(ಎ) ವಿಧಿಯ ಅಡಿ ಮಾರಾಟ ತೆರಿಗೆ ಹಾಕಬೇಕಾದರೆ ಮಾರಾಟ ಮಾಡಿರಲೇಬೇಕೆಂಬುದು ಅಗತ್ಯ ಎನಿಸುವುದಿಲ್ಲ. ಆದರೆ, ವಸ್ತುವನ್ನು ಉಪಯೋಗಿಸುವಂತಹ ಹಕ್ಕನ್ನು ಗ್ರಾಹಕನಿಗೆ ಕೊಟ್ಟಿರಬೇಕು. ಕೊಟ್ಟಿದ್ದಕ್ಕೆ ಬೆಲೆ ನಿಗದಿಪಡಿಸಿರಬೇಕು. ಅಷ್ಟಾದರೆ, ಮಾರಾಟ ತೆರಿಗೆ ವಿಧಿಸಬಹುದು ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ :2012-2013ನೇ ಸಾಲಿನ ತೆರಿಗೆ ವರ್ಷದ ಅವಧಿಗೆ, ವಾಣಿಜ್ಯ ತೆರಿಗೆ (ಲೆಕ್ಕಪರಿಶೋಧನೆ) 2.2, ಡಿವಿಒ (ಡಿವಿಷನಲ್ ವ್ಯಾಟ್ ಆಫೀಸ್- ವಿಭಾಗೀಯ ಸ್ವಮೌಲ್ಯ ತೆರಿಗೆ) 2 ಉಪ ಆಯುಕ್ತರು 2018ರ ಏಪ್ರಿಲ್ 5ರಂದು ಎಸ್‌ಟಿಬಿಗಳ ಮೇಲೆ ಮಾರಾಟ ತೆರಿಗೆ ವಿಧಿಸಿ ಆದೇಶಿಸಿದ್ದರು. ಅರ್ಜಿದಾರ ಕಂಪನಿಗಳು ಈ ಆದೇಶವನ್ನು ಬೆಂಗಳೂರಿನಲ್ಲಿರುವ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿದ್ದವು. ಈ ಅರ್ಜಿಯನ್ನು ನ್ಯಾಯಮಂಡಳಿ, 2024ರ ಮೇ 6ರಂದು ವಜಾಗೊಳಿಸಿತ್ತು. ನ್ಯಾಯಮಂಡಳಿಯ ಈ ಆದೇಶದ ವಿರುದ್ಧ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಎಸ್‌ಟಿಬಿಯನ್ನು ಒಂದು ವಸ್ತು ಎಂದು ಪರಿಗಣಿಸಲು ಬರುವುದಿಲ್ಲ. ಕೇಬಲ್ ಟಿವಿ ಸಂಪರ್ಕ ಹೊಂದಲು ಬಯಸುವವರು ಎಸ್‌ಟಿಬಿಯನ್ನು ತೆಗೆದುಕೊಳ್ಳಬೇಕು. ಅದನ್ನು ಉಪಯೋಗಿಸಿಕೊಂಡು ಅವರು ಟಿ ವಿ ಚಾನಲ್‌ಗಳನ್ನು ವೀಕ್ಷಿಸುತ್ತಾರೆ. ನಾವು ಅದನ್ನು ಗ್ರಾಹಕರಿಗೆ ಮಾರಾಟ ಮಾಡುವುದಿಲ್ಲ. ಬರೀ ಸೇವೆ ಒದಗಿಸುತ್ತೇವೆ. ಹೀಗಾಗಿ, ರಾಜ್ಯ ಸರ್ಕಾರ ಇದಕ್ಕೆ ತೆರಿಗೆ ವಿಧಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ತಿಳಿಸಿದ್ದರು.

ಇದನ್ನೂ ಓದಿ:ರಾಜ್ಯ ವಿಜ್ಞಾನ ಪರಿಷತ್​ ಆಡಳಿತ ಮಂಡಳಿಗೆ ಚುನಾವಣೆ : ಸರ್ಕಾರಕ್ಕೆ ನೋಟಿಸ್​ - SCIENCE COUNCIL GOVERNING BOARD

ABOUT THE AUTHOR

...view details